ಹರೀಶ ಮಾಂಬಾಡಿ
KARNATAKA ELECTION 2023 ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ (DAKSHINA KANNADA) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (BJP) ಬಿಜೆಪಿ 6 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿದೆ. (MANGALORE NORTH) ಮಂಗಳೂರು ಉತ್ತರದಲ್ಲಿ ಡಾ. ವೈ.ಭರತ ಶೆಟ್ಟಿ, (MANGALORE SOUTH) ದಕ್ಷಿಣದಲ್ಲಿ ಡಿ.ವೇದವ್ಯಾಸ ಕಾಮತ್, (SULLIA) ಸುಳ್ಯದಲ್ಲಿ ಭಾಗೀರತಿ ಮುರುಳ್ಯ, (BELTHANGADY) ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ, (BANTWALA) ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, (MOODUBIDIRI) ಮೂಡುಬಿದಿರೆಯಲ್ಲಿ ಉಮಾನಾಥ ಕೋಟ್ಯಾನ್ ಗೆಲುವು ಸಾಧಿಸಿದ್ದು, ಇವರಲ್ಲಿ ಸುಳ್ಯದ ಭಾಗೀರತಿ ಮುರುಳ್ಯ ಹೊಸಬರು. ಇನ್ನು ಕಾಂಗ್ರೆಸ್ (CONGRESS) ನಿಂದ (U.T.KADAR) ಯು.ಟಿ.ಖಾದರ್ ಮಂಗಳೂರು ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ವಿಜಯ ಸಾಧಿಸಿದರೆ, (PUTTUR) ಪುತ್ತೂರಿನಿಂದ ಅಶೋಕ್ ಕುಮಾರ್ ರೈ ಪ್ರಯಾಸದ ಗೆಲುವು ಸಾಧಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಲುಪಿದೆ. ಒಂದೊಮ್ಮೆ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಪುತ್ತೂರಿನಲ್ಲಿ ಕಾರ್ಯಕರ್ತರ ಬಂಡಾಯದಿಂದ ಸ್ಪರ್ಧೆಗಿಳಿದಿದ್ದಾರೆ ಎನ್ನಲಾದ ಅರುಣ್ ಕುಮಾರ್ ಪುತ್ತಿಲ ಪ್ರಬಲ ಸ್ಪರ್ಧೆ ನೀಡಿದ್ದು, ಒಂದು ಹಂತದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದು, ಅಲ್ಪ ಅಂತರದಿಂದ ಸೋಲು ಅನುಭವಿಸಿದ್ದಾರೆ. ಇನ್ನು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಚಾರದುದ್ದಕ್ಕೂ ತನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು, ತನ್ನ ಒಂಭತ್ತನೇ ಸ್ಪರ್ಧೆಯಲ್ಲಿ ಸೋಲನುಭವಿಸಿದರು. ಒಟ್ಟು 6 ಬಾರಿ ಶಾಸಕರಾಗಿದ್ದ ರೈ, ಮೂರು ಬಾರಿ ಸೋಲು ಅನುಭವಿಸಿದ್ದಾರೆ. ರಾಜೇಶ್ ನಾಯ್ಕ್ ಸತತ ಎರಡನೇ ಬಾರಿ ರೈ ಅವರನ್ನು ಸೋಲಿಸಿದ್ದಾರೆ. ಬಂಟ್ವಾಳ ಕ್ಷೇತ್ರದ ವಿವರಗಳಿಗೆ ಇಲ್ಲಿ ಓದಿರಿ.
ವಿಧಾನಸಭೆಗೆ ಮೂರು ಬಾರಿ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ, ಮೊದಲ ಬಾರಿ ಸೋತರೂ ಬಳಿಕ ಸತತ ಎರಡನೇ ಬಾರಿ ರಾಜೇಶ್ ನಾಯ್ಕ್ ಅವರು ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಸೋಲು ಕಂಡರೂ ಮತ್ತೆ 2018ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ನಾಯ್ಕ್, 2023ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ. ಒಟ್ಟು ಮೂರು ಮುಖಾಮುಖಿಯಲ್ಲಿ 2-1 ಅಂತರದ ಸರಣಿ ಜಯ ರಾಜೇಶ್ ನಾಯ್ಕ್ ಅವರಿಗೆ ಲಭಿಸಿದಂತಾಗಿದೆ. ರಮಾನಾಥ ರೈ ಅವರು ಈಗಾಗಲೇ ಇದು ನನ್ನ ಕಡೆಯ ಚುನಾವಣೆ ಎಂದ ಹಿನ್ನೆಲೆಯಲ್ಲಿ ಇನ್ನು ಇಬ್ಬರ ಮುಖಾಮುಖಿ ಕಷ್ಟ.
2013ರಲ್ಲಿ ರಾಜೇಶ್ ನಾಯ್ಕ್ ಮೊದಲ ಬಾರಿ ಸ್ಪರ್ಧೆಗಿಳಿದಿದ್ದ ಸಂದರ್ಭ ಬಿ.ರಮಾನಾಥ ರೈ (ಕಾಂಗ್ರೆಸ್) 81,665. ರಾಜೇಶ್ ನಾಯ್ಕ್ ಉಳಿಪ್ಪಾಡಿ (ಬಿಜೆಪಿ) 63815. ಅಬ್ದುಲ್ ಮಜೀದ್ (ಎಸ್.ಡಿ.ಪಿ.ಐ.)-61113. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ (ಜೆಡಿಎಸ್) 1927. ಲೋಲಾಕ್ಷ (ಆರ್ಪಿಐ ಎ) 1511. ಇಬ್ರಾಹಿಂ ಕೈಲಾರ್ (ಕೆಜೆಪಿ) 1157. ರಮಾನಾಥ ರೈ ಗೆದ್ದು ವಿಜಯದ ನಗು ಬೀರಿ, ಮುಂದೆ ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿಯಾದರು.
2018ರ ಚುನಾವಣೆಯಲ್ಲಿ ಬಿಜೆಪಿ ರಾಜೇಶ್ ನಾಯ್ಕ್ ಅವರಿಗೆ ಮತ್ತೆ ಟಿಕೆಟ್ ನೀಡಿತು. ಕಾಂಗ್ರೆಸ್ ನ ರಮಾನಾಥ ರೈ ಎಂಟನೇ ಬಾರಿ ಸ್ಪರ್ಧೆಗಿಳಿದರು. ರಾಜೇಶ್ ನಾಯ್ಕ್ 15,971 ಮತಗಳ ಅಂತರದಿಂದ ಗೆದ್ದು ಮುಯ್ಯಿ ತೀರಿಸಿಕೊಂಡರು. ಈ ಸಂದರ್ಭದ ಮತ ವಿಭಜನೆ ಹೀಗಿತ್ತು. ರಾಜೇಶ್ ನಾಯ್ಕ್ (ಬಿಜೆಪಿ) -97802, ರಮಾನಾಥ ರೈ (ಕಾಂಗ್ರೆಸ್)- 81831, ಗೆಲುವಿನ ಅಂತರ: 15,971.
ಇದೀಗ ಮೂರನೇ ಬಾರಿಯ ಮುಖಾಮುಖಿಯ ಫಲಿತಾಂಶ ಹೀಗಿದೆ. ಒಟ್ಟು ಚಲಾಯಿತ ಮತಗಳು 1,83,428. ರಾಜೇಶ್ ನಾಯ್ಕ್ 93,324. ರಮಾನಾಥ ರೈ(ಕಾಂಗ್ರೆಸ್) 85,042. ಪ್ರಕಾಶ್ ಗೋಮ್ಸ್ (ಜೆಡಿಎಸ್) 454. ಪುರುಷೋತ್ತಮ ಕೋಲ್ಪೆ (ಆಮ್ ಆದ್ಮಿ) 495. ಇಲಿಯಾಸ್ ಮಹಮ್ಮದ್ ತುಂಬೆ (ಎಸ್.ಡಿ.ಪಿಐ) 5436. ನೋಟಾ. 821. ಗಮನಿಸಬೇಕಾದ ಅಂಶವೆಂದರೆ ರಾಜೇಶ್ ನಾಯ್ಕ್ ಅವರು ಶೇ.50.29 ಮತಗಳಿಸಿ ಪೂರ್ಣ ಜಯ ಸಾಧಿಸಿದ್ದಾರೆ. ಗೆಲುವಿನ ಅಂತರ: 8282