ಹರೀಶ ಮಾಂಬಾಡಿ
ಸಾಧಿಸುವ ಛಲ ಇದ್ದರೆ, ಏನೂ ಮಾಡಬಹುದು ಎಂಬುದಕ್ಕೆ ಈ ಹದಿನೇಳರ ಹದಿಹರೆಯದ ಬಾಲಕ ಉದಾಹರಣೆ.
ಬಂಟ್ವಾಳದ ಗೂಡಿನಬಳಿಯಲ್ಲಿರುವ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿ ನರಿಕೊಂಬು ನಾಯಿಲ ಗ್ರಾಮದ ಲೋಕನಾಥ್ ಪೂಜಾರಿ, ಮೋಹಿನಿ ದಂಪತಿ ಪುತ್ರ ಸೃಜನ್ ಪೂಜಾರಿ, ತನ್ನ ಮನೆಯಲ್ಲಿ ಕುಡಿಯುವ ನೀರಿಲ್ಲ ಎಂದಾಗ ಅದಕ್ಕೊಂದು ಪರಿಹಾರವನ್ನೇ ಕಂಡುಕೊಂಡಿದ್ದಾನೆ. ಒಂದೆಡೆ ಕಾಲೇಜಿನಲ್ಲಿ ಅಕೌಂಟ್ಸ್, ಮತ್ತೊಂದೆಡೆ ಮನೆಯಲ್ಲಿ ತಾನೇ ಬಾವಿ ತೋಡಿದರೆ ನೀರು ದೊರಕಬಹುದಲ್ಲವೇ ಎಂಬ ಲೆಕ್ಕಾಚಾರ. ಮೊದಲ ಪಿಯುಸಿಯನ್ನು ಯಶಸ್ವಿಯಾಗಿ ಮುಗಿಸಿರುವ ಸೃಜನ್, ಬದುಕಿನ ಪಾಠವನ್ನು ಕಲಿತಿದ್ದಾನೆ. ಸ್ವತಃ ಮನೆಯ ಹಿತ್ತಿಲಲ್ಲಿದ್ದ ಜಾಗದಲ್ಲಿ ತನ್ನ ಪಾಡಿಗೆ ಗುಂಡಿ ತೋಡಿದ್ದು, 24 ಅಡಿ ಆಳದ ಬಾವಿ ಆಗಿದೆ. ಇದೀಗ ಸೊಂಟ ಮುಳುಗುವಷ್ಟು ನೀರು ದೊರಕಿದೆ. ಬಾಲಕನ ಭಗೀರಥ ಪ್ರಯತ್ನಕ್ಕೆ ಸುತ್ತಮುತ್ತಲಿನವರೆಲ್ಲರೂ ಭೇಷ್ ಎಂದಿದ್ದಾರೆ.
ನಾನೇ ನೋಡಿದ ಜಾಗ:
ಸಾಮಾನ್ಯವಾಗಿ ಬಾವಿ ತೋಡುವಾಗ ನೀರಿನ ಸೆಲೆ ಹುಡುಕಲು ಒದ್ದಾಡುವವರಿದ್ದಾರೆ. ಆದರೆ ಇಲ್ಲಿ ನೀರು ಸಿಗಬಹುದು ಎಂದು ಸೃಜನ್ ಅರಿತುಕೊಂಡದ್ದು, ಮತ್ತು ಅದರಲ್ಲಿ ಯಶಸ್ವಿಯಾದದ್ದು ಗಮನಾರ್ಹ. ‘’ನಾನೇ ನೋಡಿದ ಜಾಗವಿದು’’ ಎಂದು ಸೃಜನ್ ಹೇಳುತ್ತಾನೆ. ‘’ನಮಗೆ ಕುಡಿಯುವ ನೀರಿನ ಸಮಸ್ಯೆ ಹಲವು ಸಮಯಗಳಿಂದ ಇತ್ತು. ಹೀಗಾಗಿ ನಮ್ಮದೇ ಜಾಗದಲ್ಲಿ ಬಾವಿ ತೋಡಿದರೆ ಹೇಗೆ ಎಂದು ಆಲೋಚಿಸಿದೆ. ಈ ಜಾಗದಲ್ಲಿ ನೀರು ಸಿಗಬಹುದು ಎಂದು ನನ್ನ ಮನಸ್ಸಿಗೆ ಅನಿಸಿತು. ಕಳೆದ ಡಿಸೆಂಬರ್ ನಲ್ಲಿ ಫ್ರೀ ಇದ್ದಾಗ ಬಾವಿ ತೋಡಲು ಆರಂಭಿಸಿದೆ. ಅದಾದ ನಂತರ ಕಾಲೇಜಿಗೆ ಹೋಗಲಿದ್ದ ಕಾರಣ, ಮಾಡಿರಲಿಲ್ಲ. ಬಳಿಕ ಪ್ರಥಮ ಪಿಯುಸಿ ರಜೆ ಸಿಕ್ಕಿದ ನಂತರ ಮತ್ತೆ ಕೆಲಸ ಶುರುಮಾಡಿದೆ. ಮಣ್ಣು ಅಗೆದ ಬಳಿಕ ಭಟ್ಟಿಯಲ್ಲಿ ಅದನ್ನು ಹಾಕಿ, ಅದನ್ನು ಕೊಳಿಕೆಯಲ್ಲಿ ಸಿಕ್ಕಿಸಿ ಮೇಲಕ್ಕೆ ಎಳೆಯುತ್ತಿದ್ದೆ. ಮೇಲಕ್ಕೆ ಹೋಗಿ ಅದನ್ನು ಹಾಕುತ್ತಿದ್ದೆ. ಹೀಗೆ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಿದ್ದೆ. ಸ್ವಲ್ಪ ವಿಶ್ರಾಂತಿಯ ಬಳಿಕ ಸಂಜೆ ಪುನಃ ಕೆಲಸ. ನೋಡನೋಡುತ್ತಿದ್ದಂತೆ ಬಾವಿ ಆಳವಾಗುತ್ತಾ ಹೋಯಿತು. ನೀರು ಸಿಗುವ ಸೂಚನೆಯೂ ದೊರಕಿತು. ಸುಮಾರು ನಾಲ್ಕು ಅಡಿ ಸುತ್ತಳತೆಯಲ್ಲಿ ತೋಡಿದ ಬಾವಿಯನ್ನು 24 ಅಡಿಯಷ್ಟು ಕೊರೆದಿದ್ದೇನೆ. ಈಗ ನೀರು ಸಿಕ್ಕಿದೆ. ಕಷ್ಟಪಟ್ಟದ್ದಕ್ಕೆ ಪ್ರತಿಫಲ ದೊರಕಿದೆ’’ ಇದು ಸೃಜನ್ ಪೂಜಾರಿಯ ಮನದಾಳದ ಮಾತು.
ರಿಂಗ್ ಹಾಕಬೇಕು:
ಬಾವಿಯನ್ನು ಹಾಗೆಯೇ ಬಿಟ್ಟರೆ ಸಮಸ್ಯೆ ಆಗಬಹುದು. ಅದಕ್ಕೆ ರಿಂಗ್ ಹಾಕಬೇಕು ಎಂಬ ಯೋಜನೆ ಸೃಜನ್ ಪೂಜಾರಿಯ ಹೆತ್ತವರಿಗೆ ಇದೆ. ಸೃಜನ್ ತಂದೆ ಲೋಕನಾಥ್ ಮತ್ತು ತಾಯಿ ಮೋಹಿನಿ ಅವರಿಗೆ ಮಗನ ಸಾಧನೆ ಕುರಿತು ಹೆಮ್ಮೆ ಇದೆ. ಅವನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ಮುಂದೆ ರಿಂಗ್ ಹಾಕುವ ಯೋಚನೆಯಲ್ಲಿದ್ದಾರೆ.