Uncategorized

ಬಿಜೆಪಿ ಪ್ರಯೋಗ: ದಕ್ಷಿಣ ಕನ್ನಡದಲ್ಲಿ ಮತ್ತೊಮ್ಮೆ ಹೊಸಮುಖ

ಜಾಹೀರಾತು

ಟಿಕೆಟ್ ನಿರಾಕರಣೆ – ಸಂಜೀವ ಮಠಂದೂರು ಮತ್ತು ಎಸ್.ಅಂಗಾರ

ಕೊನೆಗೂ ಬಿಜೆಪಿ ಪಟ್ಟಿ ಹೊರಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಅಭ್ಯರ್ಥಿಗಳಿಗೂ ಮಣೆ ಹಾಕಲಾಗಿದೆ. ಐವರು ಹಾಲಿ ಶಾಸಕರಾದ ಮಂಗಳೂರು ದಕ್ಷಿಣ – ವೇದವ್ಯಾಸ ಕಾಮತ್, ಮಂಗಳೂರು ಉತ್ತರ – ಡಾ. ವೈ.ಭರತ್ ಶೆಟ್ಟಿ, ಮೂಡುಬಿದಿರೆ – ಉಮಾನಾಥ ಕೋಟ್ಯಾನ್, ಬಂಟ್ವಾಳ – ರಾಜೇಶ್ ನಾಯ್ಕ್, ಬೆಳ್ತಂಗಡಿ – ಹರೀಶ ಪೂಂಜ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಇವರೆಲ್ಲರೂ ಹೊಸ ಮುಖಗಳಾಗಿದ್ದವರು. ಪುತ್ತೂರಿನಲ್ಲಿ ಸಂಜೀವ ಮಠಂದೂರು ಮತ್ತು ಸುಳ್ಯದ ಆರು ಬಾರಿ ವಿಜೇತ ಎಸ್.ಅಂಗಾರ ಅವರನ್ನು ಬದಲಾಯಿಸಿ, ಹೊಸ ಮುಖಗಳಾದ ಆಶಾ ತಿಮ್ಮಪ್ಪ ಗೌಡ ಮತ್ತು ಭಾಗೀರಥಿ ಮುರುಳ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಮಂಗಳೂರು (ಉಳ್ಳಾಲ ) ಕ್ಷೇತ್ರದಲ್ಲೂ ಸತೀಶ್ ಕುಂಪಲ ಕಣಕ್ಕಿಳಿಯಲಿದ್ದಾರೆ.

ಆಶಾ ತಿಮ್ಮಪ್ಪ

ಸತೀಶ್ ಕುಂಪಲ

ವಿಶೇಷವೆಂದರೆ ಪುತ್ತೂರಿನ ಆಶಾ ತಿಮ್ಮಪ್ಪ ಗೌಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಸಂದರ್ಭ ಸತೀಶ್ ಕುಂಪಲ ಉಪಾಧ್ಯಕ್ಷರಾಗಿದ್ದರು. ಇದೀಗ ಇಬ್ಬರೂ ವಿಧಾನಸಭೆ ಪ್ರವೇಶಿಸಲು ಟಿಕೆಟ್ ಪಡೆದಿದ್ದು, ಸ್ಪರ್ಧೆಗಿಳಿಯಲಿದ್ದಾರೆ. ಯಾರ ಅದೃಷ್ಟ ಚೆನ್ನಾಗಿದೆಯೋ ಕಾದು ನೋಡಬೇಕು. ಭಾಗೀರಥಿ ಮುರುಳ್ಯ ಅವರೂ ಜಿಪಂ ಸದಸ್ಯರಾಗಿದ್ದವರು.

 

ಜಾಹೀರಾತು

ಸಂಜೀವ ಮಠಂದೂರು ಮತ್ತು ಎಸ್.ಅಂಗಾರ ಅವರಿಗೆ ಟಿಕೆಟ್ ಕೈತಪ್ಪುವ ಕುರಿತು ಕಳೆದ ಒಂದೆರಡು ತಿಂಗಳಿಂದ ಚರ್ಚೆಗಳು ವ್ಯಾಪಕವಾಗಿ ಹರಡಿದ್ದವು. ಈ ಸಂದರ್ಭ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಹೆಸರು ಸಾಕಷ್ಟು ಚಾಲ್ತಿಯಲ್ಲಿತ್ತು. ಒಂದು ಹಂತದಲ್ಲಿ ಅರುಣ್ ಕುಮಾರ್ ಪರವಾಗಿ ಟ್ವೀಟ್ ಅಭಿಯಾನವನ್ನೂ ಮಾಡಲಾಗಿತ್ತು. ಬೀದಿಯಲ್ಲಿ ಘೋಷಣೆಗಳೂ ಕೇಳಿಬಂದಿದ್ದವು. ಹಲವಾರು ಬೆಳವಣಿಗೆಗಳ ನಂತರ ಹೈಕಮಾಂಡ್ ಅಳೆದು ತೂಗಿ ಮಠಂದೂರು ಅವರನ್ನು ಬದಲಾಯಿಸಿದರೂ ಅವರದ್ದೇ ಸಮುದಾಯದ ಅಭ್ಯರ್ಥಿಯಾದ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸುವ ಮೂಲಕ ಜಾತಿವಾರು ಲೆಕ್ಕಾಚಾರವನ್ನು ಸರಿದೂಗಿಸಿದ್ದಾರೆ. ಒಂದು ಹಂತದಲ್ಲಿ ಸಮುದಾಯದವರ ಮುನಿಸೇನಾದರೂ ಉದ್ಭವವಾದರೆ ಅದನ್ನು ಶಮನಗೊಳಿಸುವ ಪ್ರಯತ್ನವನ್ನು ಮಾಡಿದಂತಿದೆ. ಈ ನಡುವೆ ಬಿಜೆಪಿಯ ಇತರ ಆಕಾಂಕ್ಷಿಗಳು ಯಾವ ರೀತಿ ಸ್ಪಂದಿಸುತ್ತಾರೋ ಕಾದು ನೋಡಬೇಕಾಗಿದೆ.

ಇನ್ನು ಸುಳ್ಯದಲ್ಲಿ ಎಸ್.ಅಂಗಾರ ಬದಲಿಗೆ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಧ್ವನಿಗಳು ವರ್ಷದಿಂದಲೇ ಇದ್ದವು. ಇದಕ್ಕೆ ಪೂರಕವಾಗಿ ಹೊರಕ್ಷೇತ್ರಗಳಿಂದಲೂ ಅಭ್ಯರ್ಥಿ ಆಕಾಂಕ್ಷಿಗಳು ಕಾಣಿಸಿಕೊಂಡಿದ್ದರು. ಸುದೀರ್ಘ ಕಾಲ ಎಂ.ಎಲ್.ಎ. ಆಗಿದ್ದ ಅಂಗಾರ ಅವರು ಕೊನೆಯ ಹಂತದಲ್ಲಿ ಮಂತ್ರಿಯೂ ಆದರು. ಉಸ್ತುವಾರಿ ಸಚಿವರೂ ಆದರು. ಈ ಹಿನ್ನೆಲೆಯಲ್ಲಿ ಅವರಿಗೆ ಅವಕಾಶವನ್ನು ಸಾಕಷ್ಟು ಬಾರಿ ಕಲ್ಪಿಸಿದ್ದು, ಇನ್ನು ಹೊಸಬರಿಗೆ ನೀಡಿದರೂ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗುವುದಿಲ್ಲ ಎಂಬ ದೃಢ ವಿಶ್ವಾಸವನ್ನು ಹೊಂದಿರುವ ಬಿಜೆಪಿ ಅಂಗಾರ ಅವರನ್ನು ಬದಲಾಯಿಸುವ ಯೋಚನೆ ಮಾಡಿತು. ಈ ಹಂತದಲ್ಲಿ ಮತ್ತೆ ಹಲವು ಲೆಕ್ಕಾಚಾರಗಳನ್ನು ಮಾಡಿದ ಬಳಿಕ ಸಕ್ರಿಯ ಕಾರ್ಯಕರ್ತೆ ಭಾಗೀರಥಿ ಮುರುಳ್ಯ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತು.

ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳು ತಮ್ಮ ಕೈತಪ್ಪುವುದಿಲ್ಲ ಎಂದು ಹೈಕಮಾಂಡ್ ನಿರೀಕ್ಷಿಸಲು ಮತ್ತೊಂದು ಕಾರಣ, ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಸಮಾಧಾನಿತ ಆಕಾಂಕ್ಷಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲು ಯೋಚನೆ ಮಾಡಿದ್ದು ಮತ್ತು ಪುತ್ತೂರು ಕ್ಷೇತ್ರದಲ್ಲಿ ಮೊದಲಿನಿಂದಲೂ ಬಂದಿರುವ ಅಸಮಾಧಾನಗಳು ಇನ್ನೂ ಶಮನವಾಗದೇ ಇರುವುದು ಎನ್ನುತ್ತವೆ ಬಿಜೆಪಿ ಮೂಲಗಳು.ಯಾವುದಕ್ಕೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಮಂತ್ರಿ ಮತ್ತು ಎಂಎಲ್ಎಯನ್ನು ಬದಲಾಯಿಸಿದ್ದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಗೊತ್ತಾಗಲು ಹೆಚ್ಚು ದಿನಗಳಿಲ್ಲ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.