ಬಂಟ್ವಾಳ: ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ಹಾಗೂ 400 ಕೆವಿ ಉಡುಪಿ ಕಾಸರಗೋಡು ವಿದ್ಯುತ್ ವಿರೋಧಿ ಹೋರಾಟ ಸಮಿತಿ ವಿಟ್ಲ ವತಿಯಿಂದ ಬಿ.ಸಿ.ರೋಡಿನ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ರೈತರ ಸಭೆ ನಡೆಸದೆ, ಯಾವುದೇ ಮಾಹಿತಿ ನೀಡದೆ ಖಾಸಗಿ ಕಂಪೆನಿಯ ಮೂಲಕ ರೈತರ ಬದುಕಿಗೆ ಮಾರಕವಾಗುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು ಸರಿಯಲ್ಲ ಎಂದು ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ವಿದ್ಯುತ್ ಮಾರ್ಗದಿಂದ ಸರಕಾರ ರೈತರನ್ನು ಬಲಿ ಕೊಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗಕ್ಕೆ ರೈತರ ಭೂಮಿಯನ್ನು ನಾವು ಕೊಡಲು ಸಿದ್ಧರಿಲ್ಲ ರೈತರಿಗೆ ಭೂಮಿಗೆ ಕೈ ಹಾಕಿದರೆ ಸುಮ್ಮನೆ ಇರುವುದಿಲ್ಲ ಎಂದು ಕೋಡಿಹಳ್ಳಿ ಎಚ್ಚರಿಸಿದರು.
ಜಿಲ್ಲಾಧಿಕಾರಿ ಬರಬೇಕು ಎಂದು ರಸ್ತೆತಡೆಗೂ ಯತ್ನ ನಡೆಯಿತು. ಬಳಿಕ ಸಹಾಯಕ ಕಮೀಷನರ್ ಆಗಮಿಸಿ ಡಿಸಿ ಪರವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ದೂರವಾಣಿ ಮೂಲಕ ರೈತಮುಖಂಡರೊಂದಿಗೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ರೈತರ ಭೂಮಿಗೆ ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದರು. ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಆಗಮಿಸಿ ಬೆಂಬಲ ಸೂಚಿಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು, ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ಬಂಟ್ವಾಳ ತಾಲೂಕು ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ, ಕಾನೂನು ಸಲಹೆಗಾರ ಎಸ್.ಪಿ.ಚಂಗಪ್ಪ, ತುಳುನಾಡ ಪಂಚಾಯತ್ ವೇದಿಕೆ ಅಧ್ಯಕ್ಷ ರೋಶನ್ ಲೋಬೊ, ಪ್ರಮುಖರಾದ ಮುರುವ ಮಹಾಬಲ ಭಟ್, ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಕೋಚೋಡಿ, ಚಿತ್ತರಂಜನ್ ಮೊದಲಾದವರು ಪಾಲ್ಗೊಂಡಿದ್ದರು.