ವಿಟ್ಲ

ನಾಲ್ಕೂವರೆ ವರ್ಷಗಳಲ್ಲಿ ತಲೆತಗ್ಗಿಸುವ ಕೆಲಸ ಮಾಡಿಲ್ಲ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಲೆ ತಗ್ಗಿಸುವ ಕೆಲಸ ಮಾಡಿಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಬಂಟ್ವಾಳ ಬಿಜೆಪಿ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನದಿಂದ ವಿಟ್ಲಪಡ್ನೂರು ಕಾಪುಮಜಲು ದೈವಸ್ಥಾನದವರೆಗೆ ನಡೆದ 2ನೇ ದಿನದ ಪಾದಯಾತ್ರೆಯ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಕುರಿತು ಯಾವುದೇ ಸುಳ್ಳು ಹೇಳುವಂತಿಲ್ಲ‌‌. ಜನರು ಕೂಡ ದಾಖಲೆಗಳನ್ನು ಪರಿಶೀಲಿಸಿ ತಿಳಿದುಕೊಳ್ಳಬಹುದು. ಅಭಿವೃದ್ಧಿ ನಿರಂತರ ಹರಿಯುವ ನೀರಾಗಿದ್ದು, ಇನ್ನೂ ಮುಂದೆಯೂ ಸಾಕಷ್ಟು ಬೇಡಿಕೆಗಳು ಬರುತ್ತದೆ. ಪಕ್ಷದ ಕಾರ್ಯಕರ್ತರು, ನಾಯಕರ‌ ವಿಶ್ವಾಸ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದೇವೆ. ಪಕ್ಷವನ್ನು ಗಟ್ಟಿಗೊಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.  ಜನರು ನೀಡಿದ ಅಧಿಕಾರದ ಮೂಲಕ ಶಾಸಕನಾಗಿ ಪಾದಯಾತ್ರೆಯ ಮಾಡಿದ್ದು, ಜನರು ನೀಡಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದ ಜನರ ಗೌರವಕ್ಕೆ ಯಾವುದೇ ರೀತಿಯ ಧಕ್ಕೆ ತರದೆ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಪ್ರಸಕ್ತ ರಾಜಕೀಯ ಸನ್ನಿವೇಶಗಳು ಹಾಗೂ ಕಾಂಗ್ರೆಸ್ ನ ಘೋಷಣೆಗಳ ಕುರಿತು ವಿವರಿಸಿ, ಉಚಿತ ಘೋಷಣೆಗಳನ್ನು ನೀಡಿದರೂ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಬಂತು. 200 ಯೂನಿಟ್ ಉಚಿತ ವಿದ್ಯುತ್ ಅನ್ನು ರಾಜಸ್ತಾನದಲ್ಲಿ ಕೊಡುವುದಿಲ್ಲಯಾಕೆ ಎಂದು ಪ್ರಶ್ನಿಸಿದರು.

ಪಾದಯಾತ್ರೆಯ ಸಂಚಾಲಕ  ಬಿ.ದೇವದಾಸ್ ಶೆಟ್ಟಿ ಅವರು ಪಾದಯಾತ್ರೆ ಸಾಗಿ ಬಂದ ಗ್ರಾಮಗಳ ಅನುದಾನದ ವಿವರ ನೀಡಿದರು. ಸಹಸಂಚಾಲಕ ಮಾಧವ ಮಾವೆ ಮಾತನಾಡಿ, ನವಬಂಟ್ವಾಳ ನಿರ್ಮಾಣದ ಜತೆಗೆ ಕ್ಷೇತಕ್ಕೆ ಹೈಟೆಕ್ ಸ್ಪರ್ಶ ನೀಡಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ ಎಂದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಿಟ್ಲಪಡ್ನೂರು ಗ್ರಾ.ಪಂ.ಅಧ್ಯಕ್ಷೆ ರೇಷ್ಮಾಶಂಕರಿ ಬಲಿಪಗುಳಿ, ನಗರ ನೀರು ಸರಬರಾಜು, ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ವಿಟ್ಲಪಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.  ಪಾದಯಾತ್ರೆಯ ಸಹಸಂಚಾಲಕರಾದ ಸುದರ್ಶನ್ ಬಜ ಉಪಸ್ಥಿತರಿದ್ದರು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮದೆಡೆಗೆ ಶಾಸಕರ ನಡಿಗೆ ಪರಿಕಲ್ಪನೆಯಡಿ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪಾದಯಾತ್ರೆ ಬಂಟ್ವಾಳದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಿಂದ ವಿಟ್ಲಪಡ್ನೂರು ಗ್ರಾಮದ ಕಾಪುಮಜಲು ದೈವಸ್ಥಾನದವರೆಗೆ ಸಾಗಿತು.

ಆರಂಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ನಂದಾವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.  ನಂದಾವರದಿಂದ ಹೊರಟ ಪಾದಯಾತ್ರೆ , ಮಂಚಿ,ಸಾಲೆತ್ತೂರು,ಕೊಳ್ನಾಡು ಬಳಿಕ ವಿಟ್ಲಪಡ್ನೂರುವಿನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನಂದಾವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಳಂದಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ದೇವದಾಸ ಶೆಟ್ಟಿ, ಮಾದವ ಮಾವೆ, ಸುದರ್ಶನ್ ಬಜ, ಸುಲೋಚನ ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ ಮೊದಲಾದವರು ಇದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts