ಬಂಟ್ವಾಳ: ಕರಾವಳಿ ಕಲೋತ್ಸವ ಜನವರಿ 20ರಿಂದ ನಡೆಯಲಿದ್ದು, ಈ ಸಂದರ್ಭ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಬೋಳಂತೂರಿನ ದ.ಕ.ಜಿಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ಚಿಣ್ಣರ ಲೋಕದ ಸೇವಾ ಬಂಧು (ರಿ) ಬಂಟ್ವಾಳ ವತಿಯಿಂದ ದತ್ತು ಸ್ವೀಕರಿಸಲಾಗುವುದು ಎಂದು ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ. 20ರಿಂದ ಫೆ.8ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಕಲೋತ್ಸವದ ಅಧ್ಯಕ್ಷರಾಗಿ ಸುದರ್ಶನ ಜೈನ್, ಚಿಣ್ಣರ ಅಧ್ಯಕ್ಷರಾಗಿ ಸಾನ್ವಿ ಶೆಟ್ಟಿ ಉಪಸ್ಥಿತರಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಮತ್ತು ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
20ರಂದು ಕಲೋತ್ಸವ ಉದ್ಘಾಟನೆ ನಡೆಯಲಿದ್ದು, ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದ ಬಳಿಕ ಅಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಶಿಕ್ಷಣನಿಧಿ ಉದ್ಘಾಟನೆ, ವಿಧಾನಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ ಸಾಂಸ್ಕೃತಿಕ ನಿಧಿ ಉದ್ಘಾಟನೆ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಐರಿನ್ ಗೋವಿಯಸ್, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಗೋಲ್ಡನ್ ಪಾರ್ಕ್ ಎಸೋಸಿಯೇಶನ್ ಪಾಲುದಾರ ಜಗನ್ನಾಥ ಚೌಟ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಚಿಣ್ಣರಲೋಕ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪಿ.ಜಯರಾಮ ರೈ ಅತಿಥಿಗಳಾಗಿರುವರು.
ಈ ಸಂದರ್ಭ ಭಾಗವತ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ, ಅಂತಾರಾಷ್ಟ್ರೀಯ ಕಬಡ್ಡಿ ಪಟು, ಪ್ರಶಾಂತ ರೈ ಕೈಕಾರ ಅವರಿಗೆ ಉದಯ ಚೌಟ ಸಾಧನಾ ಪ್ರಶಸ್ತಿ ಪ್ರದಾನ ಮತ್ತು ಕ್ರೀಡಾ, ನೃತ್ಯನಿರೂಪಣೆ ಮತ್ತು ಸಂಗೀತ ಕ್ಷೇತ್ರದ ಸಾಧನೆಗೆ ಚಿಣ್ಣರ ಸೌರಭ ರಾಜ್ಯಪ್ರಶಸ್ತಿ ಶ್ರೀನಿಧಿ ಬಿ.ಸಿ.ರೋಡ್ ಅವರಿಗೆ ಪ್ರದಾನ ಮಾಡಲಾಗುವುದು.