ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವೊಂದು ನಡೆದ ಹದಿನೈದು ದಿನಗಳೊಳಗೆ ಲೆಕ್ಕಪತ್ರ ಮಂಡನೆ ಮಾಡಿ, ಉಳಿಕೆ ಹಣವನ್ನು ಶಾಲಾ ಶಿಕ್ಷಕರಿಗೆಂದು ಠೇವಣಿ ಇರಿಸುವ ಮೂಲಕ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗಮನ ಸೆಳೆದಿದೆ.
ಅಮ್ಮುಂಜೆ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಲೆಕ್ಕಪತ್ರ ಮಂಡನೆ, ಸಮ್ಮೇಳನಕ್ಕೆ ದುಡಿದ ಸ್ವಾಗತ ಸಮಿತಿ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಧನ್ಯವಾದ ಸಮರ್ಪಣೆ ಸಭೆ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಸಮ್ಮೇಳನಕ್ಕೆಂದು ದಾನಿಗಳು, ಸಂಘ, ಸಂಸ್ಥೆಗಳಿಂದ ಸ್ವಾಗತ ಸಮಿತಿಯ ವತಿಯಿಂದ ಸಂಗ್ರಹಿಸಲಾದ ಮೊತ್ತದಲ್ಲಿ ಉಳಿಕೆಯಾದ 1,58,184 ರೂಗಳನ್ನು ಸಮ್ಮೇಳನ ನಡೆದ ಅಮ್ಮುಂಜೆ ಅನುದಾನಿತ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ನೀಡುವ ವೇತನಕ್ಕೆ ಠೇವಣಿಯಾಗಿಟ್ಟು ಬಳಸಲು ನಿರ್ಧರಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಅವರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಪ್ರೊ ಬಾಲಕೃಷ್ಣ ಗಟ್ಟಿ, ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್, ಗೌರವ ಕೋಶಾಧಿಕಾರಿ ಡಿ. ಬಿ. ಅಬ್ದುಲ್ ರಹಿಮಾನ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ, ನಿವೃತ್ತ ಪ್ರಿನ್ಸಿಪಾಲ್ ಗುಂಡಿಲಗುತ್ತು ಶಂಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಲೂವಿಝಾ ಕುಟಿನ್ಹೋ, ಕಸಾಪ ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಮಹಮ್ಮದ್, ಪದಾಧಿಕಾರಿಗಳಾದ ರವೀಂದ್ರ ಕುಕ್ಕಾಜೆ, ರಜನಿ ಚಿಕ್ಕಯಮಠ ಉಪಸ್ಥಿತರಿದ್ದರು
ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬೂಬಕರ್ ಅಮ್ಮುಂಜೆ ಮತ್ತು ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಹರೀಶ್ ರಾವ್ ವಂದಿಸಿದರು