ಬಿ.ಸಿ.ರೋಡ್ – ಪುಂಜಾಲಕಟ್ಟೆ ಹೆದ್ದಾರಿ
ಬಂಟ್ವಾಳ ಪರಿಸರದ ಪುಂಜಾಲಕಟ್ಟೆಗೆ ತೆರಳುವ ಹೆದ್ದಾರಿಯ ತುಂಬ್ಯ ಜಂಕ್ಷನ್ (ಮೂಡುಬಿದಿರೆ ಕಡೆಗೆ ತೆರಳುವ ಜಾಗ) ಮತ್ತು ಬಂಟ್ವಾಳ ಪೇಟೆಯಿಂದ ಹೈವೆ ಸಂಧಿಸುವ ಜಾಗ ಹಾಗೂ ಚಂಡ್ತಿಮಾರ್ ಪ್ರದೇಶದ ಅಪಘಾತವಾಗುವ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುರುವಾರ ಸಂಜೆ ಸಂದರ್ಶಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿದರು.
ಪ್ರತಿದಿನವೆಂಬಂತೆ ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಡೆಯುತ್ತಿದ್ದು, ಕೆಲವೊಮ್ಮೆ ಪ್ರಾಣಹಾನಿಯೂ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾನೂನಾತ್ಮಕವಾಗಿ ಬೇಕಾದ ಎಲ್ಲ ಮಾರ್ಗೋಪಾಯಗಳನ್ನು ಕೈಗೊಳ್ಳುವಂತೆ ಸೂಚಿಸಿದ ಶಾಸಕ ರಾಜೇಶ್ ನಾಯ್ಕ್, ವಾಹನ ಸವಾರರಿಗೆ ಎಚ್ಚರಿಕೆಯ ದೃಷ್ಟಿಯಿಂದ ಸೂಚನ ಫಲಕಗಳು, ಸಿಗ್ನಲ್ ಲೈಟ್ , ರಿಪ್ಲೆಕ್ಟರ್ ಅಳವಡಿಕೆ, ಸೈನ್ ಬೋರ್ಡ್ ಅಳವಡಿಕೆ ಸಹಿತ ಹೆದ್ದಾರಿ ನಿಯಮಗಳಿಗನುಸಾರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್, ಕೆಎಸ್ಸಾರ್ಟಿಸಿ ಡಿಪೊ ಮ್ಯಾಜೇಜರ್ ಶ್ರೀಶ ಭಟ್, ಪ್ರಭಾರ ಎಇಇ ಮಹಾಬಲ ನಾಯಕ್, ಸಹಾಯಕ ಎಂಜಿನಿಯರ್ ಕೀರ್ತಿ ಅಮೀನ್, ನಗರ ಪೊಲೀಸ್ ಠಾಣಾ ಎಸ್ಸೈ ಅವಿನಾಶ್, ಟ್ರಾಫಿಕ್ ಠಾಣಾ ಎಸ್ಸೈ ಮೂರ್ತಿ, ಗುತ್ತಿಗೆದಾರ ಕಂಪನಿಯ ದಾಮೋದರ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ವಿಶ್ವನಾಥ ಚಂಡ್ತಿಮಾರ್, ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು.