2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ UUCMS ತಂತ್ರಾಂಶದಲ್ಲಿನ ತೊಂದರೆಗಳನ್ನು ಸರಿಪಡಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ತಾಲೂಕು ಕಛೇರಿ ಮುಂಬಾಗ ಪ್ರತಿಭಟನೆ ನಡೆಸಲಾಯಿತು. ತಹಸೀಲ್ದಾರ್ ಪರವಾಗಿ ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಮನವಿ ಸ್ವೀಕರಿಸಿದರು.
ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನದಿಂದ ಬರುವ ಹಣವನ್ನು ಪೂರಕವಾಗಿ ಬಳಸಿಕೊಳ್ಳುತ್ತಿದ್ದರು.ಆದರೆ ಈ ಬಾರಿ,ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಆಗಿರುವುದಾಗಿ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ. ಈ ಕೂಡಲೇ ಸರಕಾರವು ಈ ವಿಷಯದ ಕುರಿತು ಗಮನವನ್ನು ಹರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿ ವೇತನದ ಹಣವನ್ನು ಬಿಡುಗಡೆಗೊಳಿಸಬೇಕಾಗಿ ಹಾಗೂ ಈ ವಿದ್ಯಾರ್ಥಿವೇತನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆಯು ಸೂಕ್ತ ತನಿಖೆ ನಡೆಯುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ಆಗ್ರಹಿಸಲಾಯಿತು.
UUCMS ಜಾರಿಯಾದ ನಂತರ ಎಲ್ಲಾ ವಿಶ್ವವಿದ್ಯಾನಿಲಯಗಳು UUCMS ತಂತ್ರಾಂಶವನ್ನು ಬಳಸಿ, ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲಾ ರೀತಿಯ ಮಾಹಿತಿಗಳನ್ನು ಇದರ ಮೂಲಕವೇ ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದಾಗಿ, ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು, ಬೇರೆ ಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ವಿಶ್ವವಿದ್ಯಾಲಯಗಳು ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ನೀಡದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿ ಸಮೂಹ ಎದುರಿಸುತ್ತಿದ್ದು ಈ ಕೂಡಲೇ ಅವುಗಳನ್ನು ಬಗೆಹರಿಸುವಂತೆ ವಿದ್ಯಾರ್ಥಿ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳಿಗೆ ,ಉನ್ನತ ಶಿಕ್ಷಣ ಸಚಿವರಿಗೆ,ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರುಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿ ಪರಿಷತ್ ಮಂಗಳೂರು ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಕೊಯಿಲ ,ಬಂಟ್ವಾಳ ನಗರ ಕಾರ್ಯದರ್ಶಿ ಪ್ರತೀಕ್ ಬಂಟ್ವಾಳ ,ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಸಮೀಕ್ಷಾ ಪ್ರಮುಖರಾದ ಸುಶಾಂತ್ ,ಧೀರಜ್ ,ಆಕಾಶ್ ,ಕಿಶೋರ್ ,ಇಂಚರ,ದೀಪಕ್ , ಅಜಿತ್, ಮುಂತಾದವರು ಉಪಸ್ಥಿತರಿದ್ದರು.