ಬಂಟ್ವಾಳ: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಾ, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಮುನ್ನುಗುತ್ತಿರುವ ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಪೂರೈಸುತ್ತಾ ಬಂದರೂ ಚಿತ್ರಮಂದಿರ ಹೀಗಲೂ ತುಂಬಿದ ಪ್ರೇಕ್ಷಕರ ಪ್ರದರ್ಶನ ನೀಡುತ್ತಿದ್ದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಮತ್ತೆ ಮತ್ತೆ ಆಕರ್ಷಿಸುತ್ತಿದೆ. ಕಾಂತರಾ ಚಿತ್ರ ವೀಕ್ಷಿಸಲು ಮನೆಮಂದಿಯೆಲ್ಲಾ ಒಟ್ಟಾಗಿ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಗ್ರಾಮದ ಜನರೆಲ್ಲಾ ಚಿತ್ರ ವೀಕ್ಷಿಸಲು ಜೊತೆಯಾಗಿ ತೆರಳುವ ಸನ್ನಿವೇಶ ಹೇಗಿಬಹುದು?
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ 150 ಮಂದಿ ಗ್ರಾಮಸ್ಥರು ಏಕಕಾಲದಲ್ಲಿ ಜತೆಯಾಗಿ ಚಿತ್ರ ವೀಕ್ಷಿಸಿ ಹೊಸ ದಾಖಲೆ ಬರೆದಿದ್ದಾರೆ. ತುಂಬೆ ಬೊಳ್ಳಾರಿಯ ಆಶೀರ್ವಾದ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸಂಘ ತಮ್ಮೂರಿನ ಜನರಿಗೆ ಕಾಂತರ ಸಿನಿಮಾ ವೀಕ್ಷಿಸಲು ಈ ಅವಕಾಶವನ್ನು ಒದಗಿಸಿದೆ. ಮಂಗಳೂರಿನ ಸಿಟಿ ಸೆಂಟರ್ ನಲ್ಲಿರುವ ಸಿನೆಪಾಲಿಸ್ ನಲ್ಲಿ ಮಂಗಳವಾರ ಸಂಜೆ ಗ್ರಾಮಸ್ಥರು ಜೊತೆಯಾಗಿ ಚಿತ್ರ ವೀಕ್ಷಿಸಿ ಕಾಂತಾರಾ ಕಣ್ತುಂಬಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭದಿನ ಕನ್ನಡ ಚಿತ್ರವನ್ನು ನೋಡಿ ಪುಳಕಿತರಾಗಿದ್ದಾರೆ.
ಹಿರಿಯರ ಸಂಭ್ರಮ: ತುಂಬೆ ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಮಕ್ಕಳು, ಮಹಿಳೆಯರು, ಹಿರಿಯರು, ಯುವಕ, ಯುವತಿಯರು ಕಾಂತಾರಾ ಚಲನ ಚಿತ್ರ ವೀಕ್ಷಿಸಿದ್ದಾರೆ. ಜೀವನದಲ್ಲಿ ಒಮ್ಮೆಯೂ ಚಿತ್ರಮಂದಿರವನ್ನೇ ನೋಡಿರದ ಅನೇಕ ಹಿರಿಯರು ಮಲ್ಟಿಫ್ಲೆಕ್ಸ್ ಥಿಯೇಟರ್ ನಲ್ಲಿ ಕಾಂತಾರ ನೋಡಿ ಸಂಭ್ರಮಿಸಿದರು. ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇನ್ನೂ ನಗರದ ಮಾಲ್ ಗಳ ಬಗ್ಗೆ ಕಲ್ಪನೆಯೂ ಇರದ ಹಿರಿಯರು ಎಸ್ಕಲೇಟರ್( ತಿರುಗು ಮೆಟ್ಟಿಲು)ಗಳಲ್ಲಿ ಹತ್ತಿ, ಇಳಿದು ಖುಷಿ ಪಟ್ಟರು. ೧೫೦ ಮಂದಿಯನ್ನು ಮಂಗಳೂರಿಗೆ ಕರೆದೊಯ್ಯಲು ಎರಡು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಚಿತ್ರ ವೀಕ್ಷಿಸಿ ಬಂದವರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ಒದಗಿಸಲಾಗಿತ್ತು.
ಚಿತ್ರ ತಂಡದಿಂದ ಮೆಚ್ಚುಗೆ: ತುಂಬೆ ಗ್ರಾಮದ ೧೫೦ ಮಂದಿ ಕಾಂತಾರ ಚಿತ್ರ ವೀಕ್ಷಿಸಲು ಬಂದಿರುವ ಸುದ್ದಿ ತಿಳಿದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿರಾದ ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ಸನಿಲ್ ಗುರು ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ತಂಡದೊಂದಿಗೆ ಮಾತು ಕತೆ ನಡೆಸಿ ಗ್ರಾಮಸ್ಥರು ಜೊತೆಯಾಗಿ ಕಾಂತಾರ ಚಿತ್ರ ನೋಡುವ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ತಮ್ಮನೆಚ್ಚಿನ ಕಲಾವಿದರೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಲ್ಲದೆ ಚಿತ್ರತಂಡದ ಕಲಾವಿದರೇ ಸ್ವತಃ ಬಂದು ತಮ್ಮ ಜೊತೆ ಸೇರಿದ್ದು ವಿಶೇಷ ಅನುಭವ ನೀಡಿತು. ಆಶೀರ್ವಾದ್ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ, ಅಧ್ಯಕ್ಷ ಸುಶಾನ್ ಆಚಾರ್ಯ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲಕ್ಷ್ಮೀ ಮಹೇಶ್ ಹಾಗೂ ಅಧ್ಯಕ್ಷೆ ಪಾರ್ವತಿ ಐತಪ್ಪ ಕುಲಾಲ್ ಅವರ ನೇತೃತ್ವದಲ್ಲಿ ಕಾಂತಾರ ಚಿತ್ರ ವೀಕ್ಷಿಸುವ ವ್ಯವಸ್ಥೆಯನ್ನು ರೂಪಿಸಲಾಯಿತು.