ಬಂಟ್ವಾಳ: ವೀರಕಂಭ ಪರಿಸರದಲ್ಲಿ 400 ಕೆವಿ ವಿದ್ಯುತ್ ಲೈನ್ ಸರ್ವೆಗೆ ರಾಜ್ಯ ರೈತಸಂಘ ಹಸಿರುಸೇನೆ ಸಹಿತ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ವೀರಕಂಭದಲ್ಲಿರುವ ಬಂಟ್ವಾಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಈ ಸಂದರ್ಭ ಮುಖಂಡರು ಮಾತುಕತೆ ನಡೆಸಿದರು.
ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ರೈತರ ಜಮೀನನ್ನು ಬಲಿಕೊಟ್ಟು 400 ಕೆವಿ ವಿದ್ಯುತ್ ಮಾರ್ಗ ಅನುಷ್ಠಾನಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರಿಗೆ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದ್ದನ್ನು ನೆನಪಿಸಿದರು.
ವಿಟ್ಲ ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ಯೋಜನೆಯ ವಿರುದ್ಧ ನಾವು ನಿರಂತರವಾಗಿ 15 ತಿಂಗಳಿನಿಂದ ಹೋರಾಟ ಮಾಡುತ್ತಿದ್ದು, ಬಡ ರೈತರ ಕೃಷಿ ಭೂಮಿಯ ಮೇಲೆ ಇವರ ಕಣ್ಣು ಬಿದ್ದಿದೆ ಎಂದರು.
ಎಐಜಿಎಫ್ ಅಂಜನ್ ಹಾಗೂ ಡಿಸಿಎಫ್ ದಿನೇಶ್‌ಕುಮಾರ್ ವೈ.ಕೆ. ಅವರಿಗೆ ರೈತರು ಮನವಿ ಸಲ್ಲಿಸಿದರು. ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಮಾಜಿಕ ವಲಯ ಅರಣ್ಯಾಧಿಕಾರಿ ರವಿಕುಮಾರ್, ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ಸದಸ್ಯರಾದ ಜನಾರ್ದನ ಪೂಜಾರಿ, ರಘು ಪೂಜಾರಿ, ಅಬ್ದುಲ್ ರಹಿಮಾನ್, ಜಯಪ್ರಸಾದ್, ಸಂದೀಪ್, ಅರಣ್ಯ ಇಲಾಖೆ ಸಿಬಂದಿ ಪ್ರೀತಮ್ ಎಸ್, ಶೋಬಿತ್, ದಯಾನಂದ್, ರಂಜಿತಾ ಮೊದಲಾವರಿದ್ದರು.