ಬಂಟ್ವಾಳ

ಬಿಜೆಪಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳಿಸುವ ಕಾರ್ಯ: ಮಾಜಿ ಸಚಿವ ರೈ ಟೀಕೆ

ಬಂಟ್ವಾಳ: ಅಧಿಕಾರ ವಿಕೇಂದ್ರೀಕರಣದ ಕನಸು ಹೊತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದ್ದರೆ, ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರಕಾರಗಳು ಇಡೀ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯಿತಿ ಮುಂಭಾಗ ಮಂಗಳವಾರ ಕಾಂಗ್ರೆಸ್ ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅವಧಿ ಮುಗಿದು ಹಲವು ಸಮಯವಾದರೂ ತಾಪಂ, ಜಿಪಂಗೆ ಚುನಾವಣೆ ನಡೆಸಲು ಮುಂದಾಗಿರುವುದು, ಅರ್ಹತೆ ಇಲ್ಲದವರಿಗೆ ಕಾಮಗಾರಿ ನೀಡಿರುವುದು, ಅಲ್ಪಸಂಖ್ಯಾತ, ದಲಿತ ಸಮುದಾಯದ ಅನುದಾನಗಳನ್ನು ಬೇರೆಡೆ ವರ್ಗಾಯಿಸುತ್ತಿರುವುದು ಹಾಗೂ ನೇರವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪಂಚಾಯಿತಿ ವ್ಯವಸ್ಥೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡುತ್ತಿರುವುದು ಇದಕ್ಕೆ ನಿದರ್ಶನ ಎಂದರು.

ನೇರ ಫಲಾನುಭವಿಗಳಿಗೆ ಸರಕಾರದ ಹಣ ತಲುಪುವಂತೆ ಮಾಡಿರುವ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಆದರೆ ಬಿಜೆಪಿ ನೇತೃತ್ವದ ಸರಕಾರ ಇದನ್ನು ಮರೆಮಾಚಿ, ತಾನು ಮಾಡಿದ್ದು ಎನ್ನುತ್ತಿದೆ ಎಂದ ರೈ, ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯರು ತಮಗೆಷ್ಟು ಅಧಿಕಾರ ಇದೆ ಎಂಬುದನ್ನು ಗುರುತಿಸಿಕೊಳ್ಳಬೇಕು ಎಂದರು. ಇವತ್ತೇನಾದರೂ ಅಲ್ಪಸ್ವಲ್ಪ ಕೆಲಸಗಳಾಗುತ್ತಿದ್ದರೆ, ಅದು ಉದ್ಯೋಗ ಖಾತ್ರಿ ಯೋಜನೆಯದ್ದು. ಅದು ಮನಮೋಹನ ಸಿಂಗ್ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಜಾರಿಗೆ ತಂದದ್ದು ಎಂದು ರೈ ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಇದು ಪಂಚಾಯತ್ ಸದಸ್ಯರ ಗೌರವದ ಸ್ವಾಭಿಮಾನದ ಹೋರಾಟ ಎಂದರು.

ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ತಾಪಂ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಐಡಾ ಸುರೇಶ್, ಜಯಂತಿ ಪೂಜಾರಿ, ಕಾಂಚಲಾಕ್ಷಿ, ಇಬ್ರಾಹಿಂ ನವಾಜ್ ಬಡಕಬೈಲು, ನಸೀಮಾ ಬೇಗಂ, ಸದಾಶಿವ ಬಂಗೇರ, ಜಗದೀಶ್ ಕೊಯಿಲ, ಸಂದೇಶ್ ಶೆಟ್ಟಿ, ರಝಾಕ್ ಕುಕ್ಕಾಜೆ, ಮಲ್ಲಿಕಾ ಪಕ್ಕಳ, ಪಿ.ಎ.ರಹೀಂ, ಮಹಮ್ಮದ್ ನಂದಾವರ, ಸಿದ್ದೀಕ್ ಸರವು, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ ಸಹಿತ ಪಕ್ಷದ ಪುರಸಭೆ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts