ಬಂಟ್ವಾಳ: ಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಶನಿವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಸಂಘರ್ಷವಿಲ್ಲದ ಸಮಾಜ ನಿರ್ಮಾಣವಾಗುತ್ತದೆ. ನಮ್ಮನ್ನು ನಾವು ಅರಿತುಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ವಿಶೇಷ ಉಪನ್ಯಾಸ ನೀಡಿ, ಶೋಷಿತ ವರ್ಗಗಳ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ ನಾರಾಯಣಗುರುಗಳು ಶಿಕ್ಷಣದ ಅರಿವಿಗೆ ಒತ್ತು ನೀಡಿದರು. ಸಮಾಜದ ಸುಧಾರಣೆಗೆ ನೆರವಾದರು ಶೋಷಣೆಗೊಳಗಾದವರ ಧ್ವನಿಯಾದರು ಎಂದರು.
ಇದೇ ಸಂದರ್ಭ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಜಿಪಂ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಯುವವಾಹಿನಿ ಅಧ್ಯಕ್ಷ ಗಣೇಶ್ ಪೂಂಜರಕೋಡಿ ಉಪಸ್ಥಿತರಿದ್ದರು. ವಿಟ್ಲ ಕಂದಾಯ ನಿರೀಕ್ಷಕ ಕೆ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ನಾರಾಯಣ ಗೌಡ ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.