ಬಂಟ್ವಾಳ: ವೀರಕಂಭ ಗ್ರಾಮದಲ್ಲಿ ಶನಿವಾರ ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರು ಗ್ರಾಮವಾಸ್ತವ್ಯ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ಒಟ್ಟು 57 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಇವುಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿ 16, ಗ್ರಾಪಂ 23, ಭೂದಾಖಲೆ 10, ಮೆಸ್ಕಾಂ 3, ಸಮಾಜ ಕಲ್ಯಾಣ 1, ಅರಣ್ಯ ಇಲಾಖೆ 2, ಕೃಷಿ 1, ಕರಾರಸಾನಿಗಮಕ್ಕೆ ಸಂಬಂಧಿಸಿ 1 ಅರ್ಜಿ ಸೇರಿವೆ.
ಪಿಂಚಣಿ, ಪಡಿತರ ಚೀಟಿ ಸಹಿತ ವಿವಿಧ ಅಗತ್ಯ ಸವಲತ್ತುಗಳನ್ನು ಈ ಸಂದರ್ಭ ವಿತರಿಸಲಾಯಿತು. ವಿವಿಧ ಪ್ರಸ್ತಾವನೆಗಳನ್ನು ದೂರುಗಳನ್ನು ಹಲವು ಬಾರಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದ ಕುರಿತು ಕೊರಗ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ದೊರಕದ ಕುರಿತು 400 ಕೆವಿ ವಿದ್ಯುತ್ ಮಾರ್ಗದ ಕುರಿತು ಸ್ಥಳೀಯರು ಗಮನ ಸೆಳೆದರು. ಕೊರಗರ ಕಾಲೊನಿಗಳಿಗೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧ್ಯಕ್ಷತೆಯನ್ನು ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪೂಜಾರಿ ವಹಿಸಿದ್ದರು. ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ವೀರಕಂಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಶಾಂತ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ಗಳಾದ ವಿಜಯ ವಿಕ್ರಮ, ನರೇಂದ್ರನಾಥ್ ಮಿತ್ತೂರು, ನವೀನ್ ಕುಮಾರ್, ಕಂದಾಯ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ, ಗ್ರಾಮಕರಣಿಕ ಅನಿಲ್ ಕುಮಾರ್, ಮನೋಹರ್, ವೈಶಾಲಿ, ಕೃತಿಕಾ, ಚಂದ್ರಕಲಾ, ಪ್ರಶಾಂತ್ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.