ಬಂಟ್ವಾಳ: ಜೂನ್ 15ರಂದು ಕಾವಳಪಡೂರು ಹಂಚಿಕಟ್ಟೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರವನ್ನು ಸೆಳೆದೊಯ್ದ ಆರೋಪಿ ತಣ್ಣೀರುಪಂಥ ನಿವಾಸಿ ಇಲ್ಯಾಸ್ (26) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ.ನಾಗರಾಜ್, ಪಿಎಸ್ಸೈ ಹರೀಶ್ ಅವರ ತಂಡ ಬಂಧಿಸಿದೆ.
ಜೂನ್ 15ರಂದು ಮಧ್ಯಾಹ್ನ4.15 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಹಂಚಿಕಟ್ಟೆ ಸಾಲುಮರದ ತಿಮ್ಮಕ್ಕ ರಸ್ತೆಯ ಹತ್ತಿರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪೂವಮ್ಮ (69) ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನ ಲೇಪಿತ ಬೆಳ್ಳಿಯ ಸರವನ್ನು ಮೊಟಾರ್ ಸೈಕಲ್ ನಲ್ಲಿ ಬಂದ ಅಪರಿಚಿತ ಸುಲಿಗೆ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಬೆಳ್ತಂಗಡಿ ತಾಲ್ಲೂಕಿನ ತಣ್ಣೀರು ಪಂಥ ನಿವಾಸಿ ಆರೋಪಿ ಇಲ್ಯಾಸ್ (26) ಎಂಬಾತನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಕೃತ್ಯಕ್ಕೆ ಬಳಸಿದ ಮೊಟಾರ್ ಸೈಕಲ್ ಮತ್ತು ಸುಲಿಗೆ ಮಾಡಿರುವ 2 ಚಿನ್ನ ಲೇಪಿತ ಬೆಳ್ಳಿಯ ಚೈನ್‍ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.