ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಕನ್ನಡ ಭವನದಲ್ಲಿ ಕಸಾಪ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನಡೆಯುವ ತಿಂಗಳ ಬೆಳಕು ಕಾರ್ಯಕ್ರಮ ಅಂಗವಾಗಿ ಶನಿವಾರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತಾಕುಮಾರಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತಾಳಮದ್ದಳೆಯಲ್ಲಿ ದೊರಕುವ ಪೌರಾಣಿಕ ವಿಚಾರಧಾರೆಯನ್ನು ಅರಿತುಕೊಳ್ಳುವುದು ಮಹತ್ವದ್ದಾಗಿದ್ದು, ಯುವ ಪೀಳಿಗೆ ಯಕ್ಷಗಾನದತ್ತ ಆಕರ್ಷಿತರಾಗಿದ್ದು, ತಾಳಮದ್ದಳೆಯಂಥ ಕಾರ್ಯಕ್ರಮ ಆಸ್ವಾದಿಸುವ ಮೂಲಕ ಜ್ಞಾನಸಂಪಾದನೆಯನ್ನು ಹೊಂದಬಹುದು ಎಂದರು.
ಪ್ರಾಯೋಜಕರಾದ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಆನಂದ ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ್ ಉಪಸ್ಥಿತರಿದ್ದರು. ಗೀತಾ ಎಸ್.ಕೊಂಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಸುಧನ್ವ ಮೋಕ್ಷ ಪ್ರಸಂಗವನ್ನು ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗ ತಂಡ ಪ್ರಸ್ತುತಪಡಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಆಜೇರು, ಮದ್ದಲೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚೆಂಡೆಯಲ್ಲಿ ಶ್ರೀಪತಿ ನಾಯಕ್ ಆಜೇರು, ಮುಮ್ಮೇಳದಲ್ಲಿ ಸುಧನ್ವನಾಗಿ ಪದ್ಮಾ ಕೆ.ಆರ್.ಆಚಾರ್ಯ, ಅರ್ಜುನನಾಗಿ ಜಯಲಕ್ಷ್ಮೀ ವಿ.ಭಟ್, ಶ್ರೀಕೃಷ್ಣನಾಗಿ ಪ್ರೇಮಾ ಕಿಶೋರ್, ಪ್ರಭಾವತಿಯಾಗಿ ಶುಭಾ ಆಚಾರ್ಯ ನಿರ್ವಹಿಸಿದರು.