ಕವರ್ ಸ್ಟೋರಿ

ಪಂಚಾಯಿತಿ ಕಚೇರಿಗೆ ತೆರಳಬೇಕಾದರೆ ಎರಡು ಬಸ್ಸು ಹತ್ತಿ ಇಳಿಯಬೇಕು!!

ಇದು ಅಮ್ಟಾಡಿ ಗ್ರಾಪಂನ ‘ಸಮೀಪ’ದರ್ಶನ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

  • ಚಿತ್ರ, ವರದಿ: ಯಾದವ ಕುಲಾಲ್ ಅಗ್ರಬೈಲ್

ಪೂರಕ ಮಾಹಿತಿ: ನಿತೇಶ್ ಕೆ.

ಜಾಹೀರಾತು

ಕಲ್ಪನೆ, ಪಚ್ಚಿನಡ್ಕ, ನಲ್ಕೆಮಾರ್ ಪ್ರದೇಶದಲ್ಲಿ ವಾಸಿಸುವ ಅಮ್ಟಾಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಜನರು ತಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಲು ಏನು ಮಾಡಬೇಕು? ಎರಡು ಬಸ್ಸು ಹತ್ತಿ ಇಳಿಯಬೇಕು. ಪ್ರಯಾಣದ ದೂರ ಲೆಕ್ಕ ಹಾಕಲು ಹೋದರೆ ಹತ್ತು ಕಿ.ಮೀಟರ್ ಗೂ ಜಾಸ್ತಿ… ಸ್ವಂತ ವಾಹನ ಇದ್ದವರಿಗಷ್ಟೇ ಗ್ರಾಮ ಪಂಚಾಯಿತಿ ಹತ್ತಿರ, ಇಲ್ಲದಿದ್ದರೆ ಜನರಿಂದ ದೂರ.. ದೂರ..

ಹೋಗಲಿ, ಎರಡು ಗ್ರಾಮಗಳನ್ನು ದಾಟಿ, ಎರಡು ಬಸ್ಸುಗಳಲ್ಲಿ ಹೋದರಾದರೂ ಪಂಚಾಯಿತಿ ಕಚೇರಿ ಸಿಗುತ್ತದೆಯೇ… ಅದೂ ಇಲ್ಲ. ಅಲ್ಲಿಗೆ ಹೋಗಬೇಕೆಂದಿದ್ದರೆ, ಮತ್ತೆ ಒಂದು ಕಿ.ಮೀ. ನಡೆಯಬೇಕು. ಅಲ್ಲೇನಾದರೂ ಸಿಬ್ಬಂದಿ ‘ಇನಿ ಆರ್ ಇಜ್ಜಿ’ ಎಂದು ಹೇಳಿದರೆ, ಮತ್ತೆ ಮರಳಿ ದಂಡಯಾತ್ರೆ!! ಒಟ್ಟಾರೆಯಾಗಿ ಸುಮಾರು 15 ಕಿ.ಮೀಟರ್ ನಷ್ಟು ಯಾತ್ರೆ ಈ ಗ್ರಾಪಂಗೆ. ಸ್ವಂತ ವಾಹನ ಇದ್ದವರಿಗೆ ಮಾತ್ರ ತಮ್ಮ ಪಂಚಾಯತ್‌ನ ಕೆಲಸ ಮಾಡಲು ಸಾಧ್ಯ.

ಏನಿದರ ವಿಚಾರ? ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಪಂಚಾಯತ್ ಕಚೇರಿ ಬಂಟ್ವಾಳ ಮೂಡ, ಬಂಟ್ವಾಳ ಕಸ್ಬಾ, ಬಂಟ್ವಾಳ ಪುರಸಭಾ ವ್ಯಾಪ್ತಿ ಮತ್ತು ಅರಳ ಗ್ರಾಮದ ಗಡಿ ಭಾಗದಲ್ಲಿರುವ ಲೊರೆಟ್ಟೋ ಚರ್ಚ್ ಬಳಿ ಇದೆ.

ಜಾಹೀರಾತು

ಬೆದ್ರಗುಡ್ಡೆ, ನಲ್ಕೆಮಾರ್, ಪಚ್ಚಿನಡ್ಕ, ಕಲ್ಪನೆ ಈ ಭಾಗದ ಜನರು ಪಂಚಾಯತ್‌ನ ಸವಲತ್ತುಗಳನ್ನು ಪಡೆಯಲು ಬಿ.ಸಿ.ರೋಡು ತನಕ ಒಂದು ಬಸ್ಸಿನಲ್ಲಿ ಬಂದು ನಂತರ ಮೂಡಬಿದ್ರೆ ಬಸ್ಸಿನಲ್ಲಿ ಸಂಚಾರ ಮಾಡಿ ಬಂಟ್ವಾಳ ಕಸ್ಬಾ ಗ್ರಾಮದ ದಾಟಿ ಲೊರೆಟ್ಟೋ ಚರ್ಚ್ ಸ್ಟಾಪ್ ನಲ್ಲಿ ಇಳಿದು ನಂತರ ಕಾಲು ದಾರಿಯಲ್ಲಿ ಒಂದು ಕಿಲೋ ಮೀಟರ್ ಸಂಚಾರ ಮಾಡಬೇಕು. ಅಮ್ಟಾಡಿ ಗ್ರಾಮಸ್ಥರಿಗೆ ಪಂಚಾಯತ್ ಕಾರ್ಯಾಲಯ ಸಂಪರ್ಕಿಸಲು ಗ್ರಾಮದೊಳಗೆ ಸುಸಜ್ಜಿತವಾದ ರಸ್ತೆ ಇದ್ದರೂ ಬಸ್ಸು ಸಂಚಾರದ ವ್ಯವಸ್ಥೆಯೂ ಇಲ್ಲ. ಹಲವಾರು ಬಾರಿ ಈ ಬೇಡಿಕೆ ಇಡಲಾಗಿದ್ದರೂ ಹೆಚ್ಚು ಪ್ರಯಾಣಿಕರು ದೊರಕಲಿಕ್ಕಿಲ್ಲ ಎಂಬ ಊಹೆಯಿಂದ ಇಲ್ಲಿ ಯಾರೂ ಬಸ್ಸು ಓಡಿಸುತ್ತಲೂ ಇಲ್ಲ.

ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಈಗ ಗ್ರಾಮ ಪಂಚಾಯತ್ ಕಚೇರಿಯಿಂದಲೇ ವಿಲೇವಾರಿ ಆಗುತ್ತದೆ.  ಹಿರಿಯ ನಾಗರೀಕರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಇಷ್ಟು ದೂರ ರಿಕ್ಷಾ ಬಾಡಿಗೆ ಕೊಟ್ಟು ಬರುವುದು ಸುಲಭದ ಮಾತಲ್ಲ.

ಅಮ್ಟಾಡಿ ಗ್ರಾಮದಲ್ಲಿ ಸುಮಾರು 5,600 ಜನಸಂಖ್ಯೆ ಹಾಗೂ ಕೂರಿಯಾಳ ಗ್ರಾಮದಲ್ಲಿ 2300ರಷ್ಟು ಜನಸಂಖ್ಯೆ ಇದೆ. ಅಮ್ಟಾಡಿ ಗ್ರಾಮದ ವಿಸ್ತೀರ್ಣ 2600 ಎಕ್ರೆ ವಿಸ್ತೀರ್ಣ ಮತ್ತು ಕೂರಿಯಾಳ ಗ್ರಾಮ 2099 ಎಕ್ರೆ ವಿಸ್ತೀರ್ಣವಿದೆ. ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇದ್ದರೂ ಪಂಚಾಯತ್ ಒಂದು ಮೂಲೆಯಲ್ಲಿ ಗ್ರಾಮಪಂಚಾಯತ್ ಕಾರ್ಯಾಲಯ ನಿರ್ಮಾಣ ಮಾಡಲಾಗಿದೆ. ಬಿ.ಸಿ.ರೋಡಿನಿಂದ ಪೊಳಲಿ ಕಡೆ ಹೊರಟರೆ ಮೊಡಂಕಾಪುವಿನಿಂದ ಶುರು ಆಗಿ ಬೆಂಜನಪದವು ಕಲ್ಪನೆ ವರೆಗೆ. ಈ ಕಡೆ ಕಾಮಾಜೆಯಿಂದ ಆರಂಭಗೊಂಡು ಲೊರೆಟ್ಟೊ, ಸೊರ್ನಾಡು, ಎರ್ಮಾಳು ವರೆಗೆ ಈ ಗ್ರಾಮ ವ್ಯಾಪಿಸಿದೆ. ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯಾಲಯವು 1.27 ಎಕ್ರೆ ಸೆಂಟ್ಸ್ ವಿಸ್ತೀರ್ಣ ಒಳಗೊಂಡಿದೆ.

ಜಾಹೀರಾತು

ಗ್ರಾಮ ಪಂಚಾಯಿತಿ ರಚನೆ ಆಗುವುದಕ್ಕಿಂತ ಮುಂಚೆ ಮಂಡಲ ಪಂಚಾಯತ್‌ಗಳು ಅಸ್ಥಿತ್ವದಲ್ಲಿದ್ದಾಗ ಕಚೇರಿಗಳು ಗ್ರಾಮ ಮಧ್ಯೆ ಕೆಂಪುಗುಡ್ಡೆ ಮತ್ತು ಕುರಿಯಾಳ ಪ್ರದೇಶದಲ್ಲೇ ಇತ್ತು. 1991ರಲ್ಲಿ ಕುರಿಯಾಳ ಮತ್ತು ಅಮ್ಟಾಡಿ ಗ್ರಾಮವನ್ನು ಒಟ್ಟು ಸೇರಿಸಿ ನೂತನ ಗ್ರಾಮ ಪಂಚಾಯತ್ ಕಾರ್ಯಾಲಯ ಮಾಡಲಾಯಿತು.

ಕಲ್ಪನೆಯಿಂದ ನಲ್ಕೆಮಾರ್ ಇಲ್ಲವೇ ಕೆಂಪುಗುಡ್ಡೆ-ಅಜೆಕಲವಾಗಿ ಬಂಟ್ವಾಳ ಬೈಪಾಸ್ ರಸ್ತೆಗೆ ಕೂಡು ರಸ್ತೆ ಇದ್ದು ಈ ಭಾಗದಲ್ಲಿ ದಿನದಲ್ಲಿ ಎರಡು ಹೊತ್ತು ಬಸ್ಸು ಸಂಚಾರ ಮಾಡಿದರೆ ಈ ಭಾಗದ ಗ್ರಾಮಸ್ಥರಿಗೆ ಸ್ವಲ್ಪ ಅನುಕೂಲವಾಗಬಹುದು. ಇಲ್ಲವೇ ಪಂಚಾಯತ್‌ನಲ್ಲಿರುವ ಸೇವೆಗಳನ್ನು ಗ್ರಾಮಸ್ಥರಿಗೆ ಮುಟ್ಟಿಸಲು ಗ್ರಾಮಸ್ಥರಿರುವಲ್ಲಿಯೇ ಪಂಚಾಯತ್ ಸೇವೆ ಸಿಕ್ಕಿದರೆ ಉತ್ತಮ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.