www.bantwalnews.com Report ಬಂಟ್ವಾಳನ್ಯೂಸ್ ವರದಿ
ಕೃಷಿ ಜಮೀನು ಹೊಂದಿರುವ ಎಲ್ಲಾ ಅರ್ಹ ರೈತರ ಆದಾಯ ಹೆಚ್ಚಿಸಲು ನೆರವಾಗುವ ಉದ್ದೇಶಕ್ಕಾಗಿ ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯಡಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ ನೆರವು ಸಿಗುವಂತೆ ಸೂಕ್ತ ಆದೇಶ ಹೊರಡಿಸುವಂತೆ ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ ಪ್ರಭಾಕರ ಪ್ರಭು ರಾಜ್ಯ ಕೃಷಿ ಸಚಿವರು ಹಾಗೂ ಕೃಷಿ ಆಯುಕ್ರನ್ನು ಲಿಖಿತ ಮನವಿ ಮೂಲಕ ಒತ್ತಾಯಿಸಿದ್ದಾರೆ. 2018 ಡಿ.1 ಅನ್ವಯವಾಗುವಂತೆ ಫೆಬ್ರವರಿ 2019 ರ ಒಳಗಾಗಿ ಸ್ವಾಧಿನದಲ್ಲಿರುವ ಭೂದಾಖಲೆಯಲ್ಲಿ ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬದವರಿಗೆ 2000 ಸಾ.ರೂ.ವಿನಂತೆ ವಾರ್ಷಿಕ ಮೂರು ಕಂತುಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು 6000 ಸಾ.ರೂ. ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ರೂಪದಲ್ಲಿ ಅರ್ಥಿಕ ನೆರವು ನೀಡುತ್ತಿರುವುದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಆದರೆ 2019 ಪೆಬ್ರವರಿ ತಿಂಗಳ ನಂತರ ರಾಜ್ಯದಲ್ಲಿ ಅನೇಕ ರೈತ ಕುಟುಂಬಗಳು ಕೃಷಿ ಜಮೀನು ಖರೀದಿಸಿ ಹಾಗೂ ಪ್ರತ್ಯೇಕ ವಿಭಾಗ ಪತ್ರ ಮಾಡಿಕೊಂಡು ಮತ್ತು ಇನ್ನಿತರ ಮೂಲಗಳಿಂದ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳು ಈ ಯೋಜನೆಯಿಂದ ವಂಚಿತವಾಗಿವೆ. ಈ ಮಹತ್ವಾಕಾಂಕ್ಷಿ ಯೋಜನೆಯು ರಾಷ್ಟ್ರದ ಎಲ್ಲಾ ಅರ್ಹ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ತಲುಪುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ ಈ ಯೋಜನೆಯ ನೆರವು ಸಿಗುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಪ್ರಭು ಅವರು ಕೃಷಿ ಸಚಿವರನ್ನು ಆಗ್ರಹಿಸಿದ್ದಾರೆ.