ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಯುವಶಕ್ತಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಧರ್ಮಸಂಸ್ಕೃತಿ ಉಳಿವು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಬಂಟ್ವಾಳ ತಾಲೂಕಿನ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರಿ ಮಹಾಗಣಪತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.
ಆತ್ಮಶಕ್ತಿ ಜೊತೆಯಾದರೆ ಉನ್ನತಿ ಸಾಧ್ಯ ಎಂದ ಅವರು, ಊರಿಗೆ ಆತ್ಮವಾಗಿ, ಅಂತರಂಗ ವಿಕಸನಕ್ಕೆ ದೇವಸ್ಥಾನ ಅಗತ್ಯವಿದೆ. ಸಮಾಜಕ್ಕೆ ಇದು ಪ್ರಭಾವ ಬೀರುತ್ತದೆ ಎಂದರು. ಅನ್ಯಾಯ, ಅಧರ್ಮ ದೂರ ಮಾಡಲು ಧರ್ಮ, ಸಂಸ್ಕೃತಿ ನೆಲೆವೀಡಾಗಬೇಕು ಎಂದರು. ಆತ್ಮಬಲ, ಆತ್ಮವಿಶ್ವಾಸ ಅಗತ್ಯ,ಬ್ರಹ್ಮಕಲಶೋತ್ಸವ ಬಳಿಕವೂ ದೇವಾಲಯಗಳಿಗೆ ಜನರು ಆಗಾಗ ಬರುತ್ತಿದ್ದರೆ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ದೇವಸ್ಥಾನದ ಹುಂಡಿಗೆ ಹಾಕಿದ ದುಡ್ಡು ಸದ್ವಿನಿಯೋಗವಾಗುವಂತೆ ಈಗಿನ ಸರ್ಕಾರ ಮತ್ತು ಧಾರ್ಮಿಕ ಪರಿಷತ್ತು ಮಾಡುತ್ತಿದೆ. ಗೋಶಾಲೆಗಳನ್ನು ನಿರ್ಮಿಸಲು ರಾಜ್ಯಾದ್ಯಂತ ಜಾಗ ಮಂಜೂರುಗೊಳ್ಳುತ್ತಿದೆ. ನಮ್ಮೊಳಗೆ ಇರುವ ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಡುಕೊಳ್ಳುವ ಕೆಲಸ ಆಗಬೇಕು, ಜೀರ್ಣೋದ್ಧಾರಗೊಂಡ ದೇವಸ್ಥಾನಕ್ಕೆ ಭಕ್ತರು ಸದಾ ಆಗಮಿಸುತ್ತಿರಬೇಕು ಎಂದರು.
ನರಹರಿ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ, ಉದ್ಯಮಿ ಮಾಧವ ಮಾವೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಬೊಂಡಾಲ ವಿನೋದ್ ಶೆಟ್ಟಿ, ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ಚಾಗತಿಸಿದರು. ರಾಜೇಶ್ ಕೊಟ್ಟಾರಿ ಮತ್ತು ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಪ್ರಮುಖರಾದ ದಿನೇಶ್ ಅಮ್ಟೂರು ವಂದಿಸಿದರು.