ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಗಳ ಪದಗ್ರಹಣ ಕಾರ್ಯಕ್ರಮ ಮತ್ತು ಸಂವಿಧಾನ ದಿನಾಚರಣೆ ಶುಕ್ರವಾರ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿ, ನಾಯಕತ್ವ ಗುಣ ಮೈಗೂಡಿಸಿ, ಉತ್ತಮ ನಡವಳಿಕೆಗಳಿಂದ ಮಾದರಿಯಾಗಿ ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸಿ ಮಾತನಾಡಿ, ನಾಯಕ ಯಾವಾಗಲೂ ಸೇವಕನಂತಿದ್ದು, ಭಾರತ ಪುನರ್ ನಿರ್ಮಾಣಕ್ಕೆ ದುಡಿಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಂಗಳೂರು ರಥಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಪ್ರೊ.ರಾಜಶೇಖರ ಹೆಬ್ಬಾರ್, ಸಂಸ್ಥೆ ಸಂಚಾಲಕ ವಸಂತ ಮಾಧವ, ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಪೂವಪ್ಪ ಟೈಲರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂಭವಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ನರಿಂಗಾನ ಇದ್ದರು. ಪ್ರಿನ್ಸಿಪಾಲ್ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ವಂದಿಸಿದರು. ಉಪನ್ಯಾಸಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.