ಹರೀಶ ಮಾಂಬಾಡಿ
ಸಂಚಾರ ಮತ್ತು ಸಂಚಕಾರ ಶಬ್ದಗಳ ಹಾಗೆಯೇ ವಾಹನ ಚಾಲನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಎಚ್ಚರ ತಪ್ಪಿದರೂ ಆಪತ್ತು ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವಾಹನ ಚಲಾಯಿಸುವವರ ಬಳಿ ಜಾಗ್ರತೆ ಮಾರ್ರೆ ಎಂದರೆ ನಿಮಗೆಷ್ಟು ಗೊತ್ತುಂಟು ಎಂದು ಮಾರುತ್ತರ ಕೊಡುವವರೇ ಅಧಿಕ. ಹೆಲ್ಮೆಟ್ ಹಾಕಿ ಎಂದು ಬಿಸಿಲಲ್ಲಿ ನಿಲ್ಲುವ ಪೊಲೀಸರು ಹೇಳುವುದು ತಮ್ಮ ಒಳ್ಳೆಯದಕ್ಕೆಂದು ಭಾವಿಸುವ ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸಿದರೆ ಅಪಘಾತ ಸಂದರ್ಭ ಅಪಾಯ ಕಡಿಮೆ ಮಾಡಬಹುದು ಎಂಬ ಬುದ್ಧಿವಂತಿಕೆ ಎಲ್ಲರಿಗೂ ಇದ್ದರೂ ಅತಿಬುದ್ಧಿವಂತಿಕೆ ಪ್ರದರ್ಶಿಸಿ ಮಾಡಬಾರದ ಜಾಗದಲ್ಲೆಲ್ಲಾ ಓವರ್ ಟೇಕ್, ಓವರ್ ಸ್ಪೀಡ್ ಹೋಗಿ ಎಡವಟ್ಟಾಗುವುದು ಉಂಟು.
ರಸ್ತೆಯ ಓರೆಕೋರೆಗಳು, ಅವೈಜ್ಞಾನಿಕ ತಿರುವುಗಳು, ರಚನೆಗಳು, ಕಣ್ಣಿಗೆ ರಾಚುವಂಥ ಹೆಡ್ ಲೈಟ್ ಗಳು ಇದಕ್ಕೆ ಪೂರಕವಾದ ವಾತಾವರಣ ನೀಡುತ್ತವೆ. ಹೀಗಾಗಿ ಬಂಟ್ವಾಳದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಅಪಘಾತಗಳು ಆಗಾಗ್ಗೆ ಕಂಡುಬರುತ್ತಿವೆ. ರಸ್ತೆ ಸಾಮರ್ಥ್ಯಕ್ಕಿಂತ ದುಪ್ಪಟ್ಟು ವಾಹನಗಳು ಸಂಚರಿಸುವ, ತೀರಾ ಅಪಾಯಕಾರಿಯಾಗಿ ಓವರ್ ಟೇಕ್ ಮಾಡುವ ಸನ್ನಿವೇಶಗಳನ್ನು ಹೊಂದಿರುವ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆಯ ವಿಸ್ತರಣೆ, ಅಭಿವೃದ್ಧಿ ಕಾಮಗಾರಿ ಇನ್ನೂ ವೇಗ ಪಡೆದುಕೊಂಡಿಲ್ಲ. ಪುತ್ತೂರು, ಮೈಸೂರುಗಳಿಗೆ ಕವಲೊಡೆಯುವ ಮಾಣಿ, ವಿಟ್ಲಕ್ಕೆ ದಾರಿ ತೋರಿಸುವ ಕಲ್ಲಡ್ಕ ಹಾಗೂ ಕೊಣಾಜೆಗೆ ತಿರುಗುವ ಮೇಲ್ಕಾರ್ ಶರವೇಗದ ವಾಹನಗಳಿಗೆ ಬ್ರೇಕ್ ಹಾಕಿಸುವ ತಿರುವುಗಳು ಹಾಗೂ ಜಂಕ್ಷನ್ ಗಳು ಸದಾ ಮೃತ್ಯುವಿಗೆ ಬಾಯ್ದೆರೆಯುತ್ತಿವೆ. ಈ ಮೂರು ಕಡೆಗಳಲ್ಲೂ ಕಳೆದ ಕೆಲ ವರ್ಷಗಳಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ. ವರ್ಷದ ಹಿಂದೆ ಕಲ್ಲಡ್ಕದಲ್ಲಿ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದರೆ, ಇದೀಗ ಮೆಲ್ಕಾರ್ ನಲ್ಲಿ ಮಂಗಳವಾರ ರಾತ್ರಿ ಸರ್ವೀಸ್ ಸ್ಟೇಶನ್ ನಲ್ಲಿ ಕೆಲಸ ಮಾಡುವ ಯುವಕನೋರ್ವನನ್ನು ಅಪಘಾತ ಬಲಿ ತೆಗೆದುಕೊಂಡಿದೆ. ಎಲ್ಲಿಯವರೆಗೆ ಎಂದರೆ ಲಾರಿ ಚಾಲಕ ಅಪಘಾತ ತಪ್ಪಿಸಲು ಹರಸಾಹಸಪಟ್ಟ ವೇಳೆ ಸರ್ಕಲ್ ಕಟ್ಟೆಗೇ ಡಿಕ್ಕಿಹೊಡೆದು, ಸರ್ಕಲ್ ಹುಡಿಯಾಗಿದೆ.
ಅಪಘಾತ ಪಾಯಿಂಟ್ ಗಳು: ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಂಟ್ವಾಳ ಪೇಟೆಗೆ ತಿರುಗುವ ಜಾಗ, ಬಿ.ಸಿ.ರೋಡ್ ಪೊಳಲಿ ಕೈಕಂಬಕ್ಕೆ ತಿರುಗುವ ಜಾಗ, ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಸಂಚಯಗಿರಿ (ಪೋಸ್ಟ್ ಆಫೀಸ್) ಕಡೆಗೆ ತಿರುಗುವ ಜಾಗ, ಬಂಟ್ವಾಳ ಪೇಟೆ, ಮೂಡುಬಿದಿರೆಗೆ ತಿರುಗುವ ತುಂಬ್ಯ ಜಂಕ್ಷನ್ ಹಾಗೂ ಪಾಣೆಮಂಗಳೂರು ಕಲ್ಲುರ್ಟಿ ಸನ್ನಿಧಿಯ ಎದುರು ಇರುವ ನರಿಕೊಂಬು ಕಡೆಗೆ ತಿರುಗುವ ರಸ್ತೆಯ ಮುಂಭಾಗ ಸಣ್ಣಪುಟ್ಟ ಅಪಘಾತಗಳು, ಒಮ್ಮೊಮ್ಮೆ ಮೃತ್ಯುಪಾಶಕ್ಕೆ ಸಿಲುಕುವ ಮಟ್ಟಕ್ಕೆ ಹೋಗುವ ಆಕ್ಸಿಡೆಂಟ್ ಗಳಿಗೆ ಹೆಸರುವಾಸಿ. ಹೈವೇ ಎಂದ ಮೇಲೆ ವಾಹನಗಳು ವೇಗವಾಗಿ ಸಾಗುವುದು ಸಹಜ. ಆದರೆ ಇದು ದ್ವಿಪಥವಾಗಿರುವ ಕಾರಣ, ವೇಗನಿಯಂತ್ರಣ ಅಗತ್ಯ. ಹೈವೇ ಪಾಟ್ರೋಲಿಂಗ್ ಪೊಲೀಸ್ ತೀರಾ ಕಾಳಜಿರಹಿತ ಚಾಲನೆ ಮಾಡುವ ವಾಹನಗಳನ್ನು ಗುರುತಿಸಿ ಸಮರ್ಪಕ ದಂಡ ವಿಧಿಸುವುದು, ಜಂಕ್ಷನ್ ಗಳಲ್ಲಿ ಪೊಲೀಸ್ ಮತ್ತು ಹೋಂ ಗಾರ್ಡ್ ಗಳು ಮಾರ್ಗದತ್ತಲೇ ಕಣ್ಣಿಟ್ಟು ಕಾಯುವುದನ್ನು ಮಾಡಬೇಕಾಗುತ್ತದೆ.