ಕವರ್ ಸ್ಟೋರಿ

ತ್ಯಾಜ್ಯ ವಿಂಗಡಣೆಯ ಪಾಠ: ಕಡೇಶಿವಾಲಯದ ಮಹಿಳಾ ಸಾರಥಿಯರ ಮಾದರಿ ಕಾರ್ಯ

ಹರೀಶ ಮಾಂಬಾಡಿ

ಇವರಿಬ್ಬರ ಹೆಸರು ಪ್ರಮೀಳಾ ಮತ್ತು ಲಕ್ಷ್ಮೀ. ಕಡೇಶಿವಾಲಯ ಗ್ರಾಮ ಪಂಚಾಯಿತಿಯ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ಇವರೇ ಸಾರಥಿಯರು. ತ್ಯಾಜ್ಯ ಸಂಗ್ರಹವನ್ನು ಮಾಡಿ ಗಮ್ಯ ಸ್ಥಾನಕ್ಕೆ ನೀಡಿ ಮರಳುವುದಷ್ಟೇ ಇವರ ಕಾಯಕವಲ್ಲ. ಪ್ರತಿ ಮನೆಗೆ ತೆರಳುವ ಸಂದರ್ಭ ತ್ಯಾಜ್ಯ ವಿಲೇವಾರಿ ಏಕೆ ಅಗತ್ಯ, ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವುದು ಹೇಗೆ ಎಂಬ ಮಾಹಿತಿಯನ್ನೂ ನೀಡುತ್ತಾರೆ. ನಿಜ ಅರ್ಥದ ಸ್ವಚ್ಛತಾ ರಾಯಭಾರಿಗಳು ಈ ಪ್ರಮೀಳೆಯರು.

ಗ್ರಾಮದ ಬೊಳ್ಳಾರು ಮುಂಗೂರು ನಿವಾಸಿ ಪ್ರಮೀಳಾ ಹಾಗೂ ಪೆರ್ಲಾಪು ಮುಂಡಾಳ ನಿವಾಸಿ ಲಕ್ಷ್ಮೀ ಅವರಿಗೆ ಡ್ರೈವಿಂಗ್ ಬರುತ್ತಿತ್ತು. ಗ್ರಾಮ ಪಂಚಾಯಿತಿಗೆ ಸ್ವಚ್ಛತೆಗೆ ಸಂಬಂಧಿಸಿ ಮಾತೃಸಂಜೀವಿನಿ ಒಕ್ಕೂಟಕ್ಕೆ ನಿರ್ವಹಣಾ ಜವಾಬ್ದಾರಿ ಇದ್ದು ಪ್ರಾಯೋಗಿಕ ಕಾರ್ಯಾಚರಣೆ ಆರಂಭಗೊಂಡ ಸಂದರ್ಭ ಒಕ್ಕೂಟದ ಅಧ್ಯಕ್ಷೆ ಶಾಮಲಾ ಶೆಟ್ಟಿ, ಮಾತೃಸಂಜೀವಿನಿ ಘಟಕದ ಮುಖ್ಯ ಪುಸ್ತಕ ಬರಹಗಾರರಾದ ಮಮತಾ, ಪಿಡಿಒ ಸುನಿಲ್, ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್ ಅವರ ಪ್ರೋತ್ಸಾಹ, ಬೆಂಬಲದೊಂದಿಗೆ ಗ್ರಾಪಂ ವಾಹನವನ್ನು ಈ ಮಹಿಳೆಯರಿಬ್ಬರು ಚಲಾಯಿಸತೊಡಗಿದರು. ದ್ವಿಚಕ್ರ ವಾಹನ ಓಡಿಸಲು ಕಲಿತಿದ್ದ ಇಬ್ಬರೂ ಈಗ ತ್ಯಾಜ್ಯ ವಿಲೇವಾರಿ ವಾಹನ ಓಡಿಸಲು ಸಮರ್ಥರು.

ಕಡೇಶಿವಾಲಯ ಗ್ರಾಪಂ ವ್ಯಾಪ್ತಿಯಲ್ಲಿ 1196 ಮನೆಗಳಿವೆ. ಇದೀಗ ವಾರಕ್ಕೆರಡು ಬಾರಿ 500ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಈ ಸಂದರ್ಭ ತ್ಯಾಜ್ಯ ಬೇರ್ಪಡಣೆ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. ವಾಸನೆಮುಕ್ತ ಘಟಕ ನಿರ್ಮಾಣ ಇದರ ಮೂಲ ಉದ್ದೇಶ.

ಕಡೇಶ್ವಾಲ್ಯ ಗ್ರಾ.ಪಂ. ಹಾಗೂ ಅಲ್ಲಿನ ಮಾತೃ ಸಂಜೀವಿನಿ ಒಕ್ಕೂಟವು ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ವಹಿಸುವ ಕುರಿತು ಒಡಂಬಡಿಕೆ ಮಾಡಿಕೊಂಡಿದೆ. ಒಕ್ಕೂಟಕ್ಕೆ ಗ್ರಾ.ಪಂ.ನಿಂದ ತಿಂಗಳಿಗೆ 30 ಸಾವಿರ ರೂ.ಗಳಂತೆ ನೀಡಲಾಗುತ್ತದೆ. ತ್ಯಾಜ್ಯ ಸಂಗ್ರಹದ ಕುರಿತು ಶುಲ್ಕ ಸಂಗ್ರಹದ ಕಾರ್ಯವನ್ನೂ ಒಕ್ಕೂಟವೇ ಮಾಡುತ್ತಿದೆ. ದ.ಕ.ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)-ಸಂಜೀವಿನಿ ಮೂಲಕ ಸುಮಾರು 28 ಗ್ರಾ.ಪಂ.ಗಳಲ್ಲಿ ಮಹಿಳೆಯರೇ ಸ್ವಚ್ಛ ಸಂಕೀರ್ಣವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸುಮಾರು 59 ಮಂದಿ ಮಹಿಳೆಯರು ತರಬೇತಿ ಪಡೆದು ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಕಡೇಶ್ವಾಲ್ಯ ಗ್ರಾ.ಪಂ.ನಲ್ಲಿ ಮಹಿಳೆಯರೇ ಪೂರ್ಣ ಪ್ರಮಾಣದಲ್ಲಿ ವಾಹನದ ಚಾಲಕರಾಗಿ ದುಡಿಯುತ್ತಿದ್ದು, ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇತರ ಗ್ರಾ.ಪಂ.ಗಳಲ್ಲಿ ಮಹಿಳಾ ಚಾಲಕರನ್ನು ತಯಾರುಗೊಳಿಸುವ ಕುರಿತು ಸಿದ್ಧತೆ ನಡೆಸಲಾಗಿದೆ. ಇಬ್ಬರು ಚಾಲಕಿಯರು ಸೇರಿ ಒಟ್ಟು 4 ಮಂದಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ವಚ್ಛ ಸಂಕೀರ್ಣ ಘಟಕದಲ್ಲೀಗ ತ್ಯಾಜ್ಯ ಅಂತಿಮ ಹಂತದ ಬೇರ್ಪಡಿಸುವ ಕಾರ್ಯ ನಡೆಸಲಾಗುತ್ತದೆ. ಸೋಮವಾರದಿಂದ ಗ್ರಾಮಸ್ಥರಿಗೆ ಹಸಿಕಸ, ಒಣ ಕಸ ಪ್ರತ್ಯೇಕವಾಗಿಡಲು ಬಕೆಟ್ ವಿತರಿಸಲಾಗುತ್ತದೆ. ತ್ಯಾಜ್ಯದ ತೊಟ್ಟಿಯನ್ನೂ ನಿರ್ಮಿಸಲಾಗಿದ್ದು, ವಾಸನೆಮುಕ್ತ ಸ್ವಚ್ಛ ಸಂಕೀರ್ಣವನ್ನು ಮಾದರಿಯನ್ನಾಗಿಸುವುದು ನಮ್ಮ ಉದ್ದೇಶ ಎಂದು ಪಿಡಿಒ ಸುನಿಲ್ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ