ಬಂಟ್ವಾಳ: ಕೇಂದ್ರ ಸರಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸೋಮವಾರ ಬಿ.ಸಿ.ರೋಡ್ ಕೈಕಂಬದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬೀದಿ ನಾಟಕವನ್ನು ಪ್ರದರ್ಶಿಸಿ, ಗಮನ ಸೆಳೆದರು. ಹೆದ್ದಾರಿಯ ಪಕ್ಕ ಪ್ರತಿಭಟನಾ ನಿರತರನ್ನು ಉದ್ದೆಶಿಸಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್, ಪ್ರಮುಖರಾ ಅಕ್ಬರ್ ಆಲಿ ಮಾತನಾಡಿ, ಇಂದು ಸರಕಾರದ ವಿರುದ್ಧ ನಡೆಯುವ ಪ್ರತಿಭಟನೆಯನ್ನು ದೇಶದ ವಿರುದ್ಧ ನಡೆಯುವ ಪ್ರತಿಭಟನೆ ಎಂದು ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ಕೈ ಒಪ್ಪಿಸಲು ಸಹಕಾರಿಯಾಗುವಂತೆ ರೂಪಿಸಿರುವ ಕೇಂದ್ರ ಸರಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳು ದೇಶದ ರೈತರ ಮರಣ ಶಾಸನವಾಗಿದೆ ಎಂದರು.
ಪ್ರಮುಖರಾದ ಶಾಹುಲ್ ಹಮೀದ್ ಎಸ್.ಎಚ್., ಯೂಸುಫ್ ಅಲಡ್ಕ, ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಸಲೀಂ ಆಲಂಪಾಡಿ, ಖಲಂದರ್ ಪರ್ತಿಪಾಡಿ, ಇಕ್ಬಾಲ್ ಪರ್ಲ್ಯ, ಇಕ್ಬಾಲ್ ಮೈನ್ಸ್, ಮಜೀದ್ ಆಲಡ್ಕ, ಝಕರಿಯಾ ಗೋಳ್ತಮಜಲು, ಸತ್ತಾರ್ ಕಲ್ಲಡ್ಕ, ಕೆ.ಎಂ.ಅಬ್ದುಲ್ ರಹ್ಮಾನ್ ಉದ್ದೋಟು ಆಲಾಡಿ ಮೊದಲಾದವರು ಉಪಸ್ಥಿತರಿದ್ದರು. ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.