ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ 6, 7, ಮತ್ತು 8ನೇ ತರಗತಿ ಗಳ ಪ್ರಾರಂಭೋತ್ಸವ ವಿಶಿಷ್ಟವಾಗಿ ನಡೆಯಿತು.
ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಶುಭ ಹಾರೈಸಿದರು. ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಮಕ್ಕಳನ್ನು ಆರತಿ ಬೆಳಗಿ, ಪನ್ನೀರು ಹೂ ಸಿಂಪಡಿಸಿ ಶಾಲೆಗೆ ಬರಮಾಡಿಕೊಂಡರು. ಶಾಲಾ ವತಿಯಿಂದ ಮಕ್ಕಳಿಗೆ ಬರೆಯಲು ಪೆನ್ನು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಂದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ನೀಡಲಾಯಿತು. ಈ ಸಂದರ್ಭ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ವಿಟ್ಲ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ,ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ಅಧ್ಯಕ್ಷ ಕೊರಗಪ್ಪ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಉಪಾಧ್ಯಕ್ಷೆ ವಿಜಯ ಶೇಖರ್, ಹಾಗೂ ಸಮಿತಿ ಸದಸ್ಯರು ಮಕ್ಕಳ ಪೋಷಕರು ಉಪಸ್ಥಿತರಿದ್ದರು ಶಾಲಾ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ಸೇರಿ ಶಾಲಾ ಪ್ರಾರಂಭೋತ್ಸವ ಪೂರ್ವತಯಾರಿಯಾಗಿ ಶಾಲೆಯನ್ನು ಸ್ವಚ್ಛಗೊಳಿಸಿದರು. ಸಾಮಾಜಿಕ ಅಂತರ ಕಾಪಾಡಲು ಶಾಲಾ ಆವರಣಕ್ಕೆ ಅಂತರ ಚೌಕಳಿ ಮಾಡಲಾಗಿತ್ತು. ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಪೂರ್ತಿ ಶಾಲೆಗೆ ಸ್ಯಾನಿಟೈಸರ್ ಮಾಡಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯು ಶಾಲೆಯನ್ನು ತಳಿರು-ತೋರಣಗಳಿಂದ ಅಲಂಕರಿಸಿದ್ದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ವಂದಿಸಿದರು