ಪಕ್ಷ ಗಟ್ಟಿಯಾಗಿ ನಿಲ್ಲಲು ಕಾರ್ಯಕರ್ತರ ಶ್ರಮ ಪ್ರಮುಖ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಹಳಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಶಕ್ತರಾಗಿದ್ದೇವೆ, ಕೋವಿಡ್ ಸಮರ್ಥವಾಗಿ ಎದುರಿಸುವ ಜೊತೆಗೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಜಿಪಂ, ತಾಪಂ ಚುನಾವಣೆಯಲ್ಲಿ ವಿಜಯಿಯಾಗಲು ಕಾರ್ಯಕರ್ತರ ಶ್ರಮ ಅಗತ್ಯ, ಸುಮಾರು ಒಂದು ಸಾವಿರ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿದ್ದು, 800ಕ್ಕೂ ಅಧಿಕ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿವೆ. ಕಷ್ಟದ ಸಮಯದಲ್ಲಿ ಜನರೊಂದಿಗಿದ್ದು ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅಪೂರ್ವ ಕೆಲಸ ಎಂದರು.
ಪಕ್ಷದಿಂದ ಆದ ಕೆಲಸವನ್ನು ಗುರುತಿಸಲು ವಿಫಲವಾದರೆ ಕ್ಷೇತ್ರವನ್ನು ಉಳಿಸಲು ಅಸಾಧ್ಯ ಎಂದು ನೆನಪಿಸಿದ ಶಾಸಕರು, ಎರಡು ವರ್ಷಗಳಲ್ಲಿ ಬಹಳಷ್ಟು ಅನುದಾನ ಬಂದಿದೆ. ಜನಪ್ರತಿನಿಧಿಗಳು ಪಕ್ಷದಿಂದ ಆಯ್ಕೆಗೊಂಡವರು, ಪಕ್ಷವನ್ನು ಬಲಪಡಿಸಲು ಕೆಲಸ ಮಾಡಬೇಕು. ಪಕ್ಷ ಹೇಳಿದಂತೆ ಕೆಲಸ ಮಾಡಲು ನಾನು ಬದ್ಧ, ಪಕ್ಷ ಗಟ್ಟಿಯಾಗಬೇಕು. ರಾಜಧರ್ಮವನ್ನು ಪಾಲಿಸಿದರೆ ಪಕ್ಷಕ್ಕೂ ಒಳ್ಳೆಯದು, ಶಾಂತಿಯನ್ನು ಕಾಪಾಡುವುದು ಮುಖ್ಯವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆ ಆಗಿಲ್ಲ. ಬಂಟ್ಚಾಳದಲ್ಲಿ ನೆರೆ ಬಂದಾಗ ಸ್ಪಂದನೆ ಮಾಡಲಾಗಿದ್ದು, ಕೋವಿಡ್ ಗೆ ವಾರ್ ರೂಮ್ ಮೂಲಕ ನಿರಂತರ ಸ್ಪಂದಿಸಲಾಗಿದೆ. ಕ್ಷೇತ್ರದಲ್ಲಿ ಶಾಂತಿ ನೆಲೆಸಿದ್ದು, ಯಾವುದೇ ಮನೆಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು, ಉತ್ತಮ ಸಂಸ್ಕಾರ ಶಿಕ್ಷಣ ದೊರೆಯಬೇಕು ಎಂದರು.
ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್ ಸಮಾರೋಪ ಭಾಷಣ ಮಾಡಿದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಕೆ. ಹರಿಕೃಷ್ಣ ಬಂಟ್ವಾಳ, ರಾಮದಾಸ ಬಂಟ್ವಾಳ, ದೇವದಾಸ ಶೆಟ್ಟಿ, ಸುಲೋಚನಾ ಭಟ್, ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು. ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿಯನ್ನು ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ಸಲ್ಲಿಸಿದರು. ಕ್ಷೇತ್ರ ಕಾರ್ಯದರ್ಶಿ ರವೀಶ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಅಂಚನ್ ವಂದನಾರ್ಪಣೆ ಸಲ್ಲಿಸಿದರು. ಡೊಂಬಯ ಅರಳ ಕಾರ್ಯಕ್ರಮ ನಿರ್ವಹಣೆ ಮಾಡಿದರು.