ಪರಿಹಾರ ನೀಡಲು ಒಂದು ತಿಂಗಳ ಗಡುವು ನೀಡಿದ ಸಂತ್ರಸ್ತರು
ಬಿ.ಸಿ.ರೋಡ್ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಗಲಗೊಳ್ಳುವ ಕಾರ್ಯ ನಡೆಸುವ ಸಂದರ್ಭ ಭೂಸ್ವಾಧೀನ ಮಾಡಿದರೂ ಪರಿಹಾರ ಇನ್ನೂ ದೊರಕಿಲ್ಲ ಎಂದು ಆರೋಪಿಸಿ ಸ್ಥಳೀಯ ಸಂತ್ರಸ್ತರು ಹೆದ್ದಾರಿ ಮಧ್ಯೆ ಬೇಲಿ ಹಾಕಿ ಮಂಗಳವಾರ ನಾವೂರಿನ ಹಳೇಗೇಟು ಸಮೀಪ ಪ್ರತಿಭಟನೆ ನಡೆಸಿದರು. ಸ್ಥಳೀಯರಾದ ಸದಾನಂದ ನಾವೂರು ಅವರು ಹೆದ್ದಾರಿಗಾಗಿ ನೀಡಿದ ಜಾಗಕ್ಕೆ ಬೇಲಿ ಹಾಕಿ ಪ್ರತಿಭಟನೆಯನ್ನು ಆರಂಭಿಸಿದರು.
ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಿಂದ ಬಂಟ್ವಾಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲಗೊಳ್ಳುವ ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಹಲವರಿಗೆ ಭೂಸ್ವಾಧೀನ ಮಾಡಿದರೂ ಪರಿಹಾರ ಇನ್ನೂ ಬಂದಿಲ್ಲ ಎಂಬುದಾಗಿ ಅವರು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಪರಿಹಾರ ನೀಡಲು ಒಂದು ತಿಂಗಳು ಗಡುವನ್ನು ನೀಡಿರುವ ಪ್ರತಿಭಟನಾಕಾರರು, ಅಷ್ಟರೊಳಗೆ ಬೇಡಿಕೆ ಈಡೇರದೇ ಇದ್ದರೆ, ಹೆದ್ದಾರಿ ತಡೆಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.