ಬಂಟ್ವಾಳ: ಕೋವಿಡ್ ಸಂಕಷ್ಟಗಳ ಮಧ್ಯೆಯೂ ಮಾಣಿ ಗ್ರಾಮ ಪಂಚಾಯತ್ ವತಿಯಿಂದ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಗ್ರಾಮದಲ್ಲಿ ನಾಲ್ಕು ಕಾಂಕ್ರೀಟ್ ರಸ್ತೆಗಳ ಕಾಮಗಾರಿ ಪೂರ್ತಿಯಾಗಿದ್ದು, ಇನ್ನೂ ಎರಡು ಕಾಂಕ್ರೀಟ್ ರಸ್ತೆಗಳು ಅತೀ ಶೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯ ಮೂಲಕ ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಮಹತ್ವವನ್ನು ನೀಡುತ್ತಿದ್ದು, ಇಲಾಖೆಯ ನಿಯಮ ನಿಬಂಧನೆಗಳನ್ನು ಪಾಲಿಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಪಂಚಾಯತ್ ತೆರಿಗೆ ಮತ್ತು ಶುಲ್ಕಗಳನ್ನು ಸರಿಯಾದ ಸಮಯಕ್ಕೆ ಪಾವತಿಸದೇ ಇರುವವರ ಪಟ್ಟಿಯನ್ನು ಮಾಡಿ ಅವರಿಗೆ ಸೂಕ್ತ ನಿರ್ದೇಶನವನ್ನು ಮಾಡಬೇಕು. ಪಂಚಾಯತ್ ನಿಯಮ ನಿಬಂಧನೆಗಳನ್ನು ಸರಿಯಾಗಿ ಪಾಲಿಸದೇ ಇರುವ ವರ್ತಕರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಪಂಚಾಯತ್ ಸದಸ್ಯರ ಮಾತಿಗೆ ಉತ್ತರಿಸಿದ ಅಧ್ಯಕ್ಷರು, ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಈ ಕಾರ್ಯಗಳನ್ನು ಪಂಚಾಯತ್ ಸಿಬ್ಬಂದಿಯವರಲ್ಲಿ ಮಾಡಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಸುತ್ತೋಲೆ ಮತ್ತು ಇಲಾಖಾ ವರದಿ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿಯವರು ಸಭೆಯಲ್ಲಿ ಮಂಡಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ ತೋಟ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತಾ, ಮಿತ್ರಾಕ್ಷಿ ಸಭೆಯಲ್ಲಿ ಉಪಸ್ಥಿತರಿದ್ದು ಚರ್ಚೆಗಳಲ್ಲಿ ಪಾಲ್ಗೊಂಡರು.