ಬಂಟ್ವಾಳ: ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪರಿಹಾರ ಘೋಷಣೆಯಾಗಿದ್ದು, ಈ ವಿಚಾರಕ್ಕೆಸಂಬಂಧಿಸಿ ಮಧ್ಯವರ್ತಿಗಳಿಗೆ ದಾಖಲಾತಿ ನೀಡಬೇಡಿ ಎಂದು ಕಾರ್ಮಿಕ ಇಲಾಖೆ ಸೂಚಿಸಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಡಿಯಲ್ಲಿ ನೋಂದಾಯಿತವಾಗಿರುವ ಕಟ್ಟಡ ಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-19 ಪರಿಹಾರ ಈಗಾಗಲೇ ಘೋಷಿಸಿದೆ. ಸಹಾಯಧನಕ್ಕಾಗಿ ಕಟ್ಟಡ ಕಾರ್ಮಿಕರಿಗೆ ತಲಾ ರೂ.3000ಗಳನ್ನು ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಭದ್ರತಾ ಮಂಡಳಿಯಡಿ ನೋಂದಾಯಿಸಿದ ಹಮಾಲರು, ಮನೆ ಕೆಲಸ, ಚಿಂದಿ ಆಯುವವರು, ಮೆಕ್ಯಾನಿಕ್ ಗಳು, ಟೈಲರುಗಳು, ಅಕ್ಕಸಾಲಿಗರು, ಅಗಸರು, ಕಮ್ಮಾರರು, ಭಟ್ಟಿ ಕಾರ್ಮಿಕರು ಹಾಗೂ ಕ್ಷೌರಿಕರಿಗೆ ತಲಾ 2000 ರೂ. ಗಳ ಕೋವಿಡ್ -19 ಪರಿಹಾರ ಘೋಷಣೆ ಮಾಡಿದೆ. ಈ ಪರಿಹಾರವನ್ನು ನೇರವಾಗಿ ಡಿಬಿಟಿ ಮೂಲಕ ಅವರ ಖಾತೆಗೆ ಜಮೆ ಮಾಡಲು ಅವಕಾಶ ವಿರುವುದರಿಂದ ಕಾರ್ಮಿಕ ಇಲಾಖೆಯಿಂದ ಯಾವುದೇ ದಾಖಲಾತಿಗಳನ್ನು ನೀಡಲು ನಿರ್ದೇಶನ ನೀಡಿರುವುದಿಲ್ಲ. ಆದರೆ ಕೆಲವು ಮಧ್ಯವರ್ತಿಗಳು ಕಾರ್ಮಿಕರಿಂದ ಹಣ ಪಡೆದು ಗುರುತಿನ ಚೀಟಿ, ಆಧಾರ್ ಕಾರ್ಡ್,ಮತ್ತು ಭ್ಯಾಂಕ್ ಜೆರಾಕ್ಸ್ ಪ್ರತಿಗಳನ್ನು ಪಡೆಯುತ್ತಿರುವುದರ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅದ್ದರಿಂದ ಕಾರ್ಮಿಕರು ಯಾವುದೇ ದಾಖಲೆಗಳನ್ನು, ಅರ್ಜಿಯನ್ನು ಯಾವುದೇ ಮಧ್ಯವರ್ತಿಗಳಲ್ಲಾಗಲಿ ಆಥಾವ ಸಂಘಸಂಸ್ಥೆಯವರಲ್ಲಾಗಲಿ. ಸಿ ಎಸ್ ಸಿ ಸೆಂಟರ್ ಗಳಲ್ಲಾಗಲಿ ನೀಡಬಾರದೆಂದು ಕಾಮಿ೯ಕ ನಿರೀಕ್ಷಕರು, ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.