ಬಂಟ್ವಾಳ: ಶಂಭೂರಿನ ಎಎಂಆರ್ ಡ್ಯಾಂ ನಿಂದ ಶೇಖರಿಸಲಾದ ನೀರನ್ನು ನಿಧಾನವಾಗಿ ನದಿಯ ಕೆಳಗೆ ಬಿಡಲಾಗುತ್ತಿದ್ದು, ನದಿ ತೀರ ವಾಸಿಗಳು ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ಎಎಂಆರ್ ತಿಳಿಸಿದೆ.
ಶಂಭೂರಿನಲ್ಲಿರುವ ಎಎಂಆರ್ ಪವರ್ ಪ್ರೈವೇಟ್ ಲಿ. ಅಣೆಕಟ್ಟಿನ ಗೇಟಿನ ಹಾಗೂ ವಿದ್ಯುತ್ ಸ್ಥಾವರದ ವಾರ್ಷಿಕ ನಿರ್ವಹಣೆಗಾಗಿ ಜೂನ್ 3ರಿಂದ ಅಣೆಕಟ್ಟಿನಲ್ಲಿ ಶೇಖರಿಸಲಾದ ನೀರನ್ನು ನಿಧಾನವಾಗಿ ನದಿಯ ಕೆಳಗಡೆ ಬಿಡಲಾಗುತ್ತಿದೆ. ಆದ್ದರಿಂದ ಅಣೆಕಟ್ಟಿನ ಕೆಳಭಾಗದ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಅಲ್ಪಪ್ರಮಾಣದಲ್ಲಿ ಏರಿಳಿತವಾಗುವುದರಿಂದ ನದಿಯ ಇಕ್ಕೆಲಗಳಲ್ಲಿ ವಾಸಿಸುವ ಜನರಿಗೆ ಹಾಗೂ ಸಾಕುಪ್ರಾಣಿಗಳಿಗೆ ಮುಂಜಾಗರೂಕತಾ ಕ್ರಮವನ್ನು ವಹಿಸಿಕೊಳ್ಳಲು ಅಲ್ಲದೆ, ಅಣೆಕಟ್ಟಿನ ಮೇಲ್ಭಾಗದಲ್ಲಿ ನೀರಿನ ಮಟ್ಟ ಕೆಳಗಿಳಿಯುವುದರಿಂದ ಇಕ್ಕೆಲಗಳಲ್ಲಿ ಪಂಪು ಬಳಕೆದಾರರು ಮುಂಜಾಗ್ರತೆಯನ್ನು ಕೈಗೊಳ್ಳಲು ವಿನಂತಿಸಲಾಗಿದೆ.
ನರಿಕೊಂಬು, ಬಾಳ್ತಿಲ, ಸರಪಾಡಿ, ಕಡೇಶಿವಾಲಯ, ನಾವೂರ, ಸಜಿಪಮುನ್ನೂರು, ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ಬಳಕೆದಾರರು ಈ ಕುರಿತು ಗಮನಹರಿಸಬೇಕು ಎಂದು ಎಎಂಆರ್ ಪ್ರಕಟಣೆ ತಿಳಿಸಿದೆ.