ಬಂಟ್ವಾಳ: ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿ ಕೊಂಡು ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೇವಾ ಕಾರ್ಯದನ್ವಯ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ಬಂಟ್ವಾಳ ಕ್ಷೇತ್ರ ಘಟಕ ಆಶ್ರಯದಲ್ಲಿ ಕರೋನಾ ಫ್ರಂಟ್‌ಲೈನ್ ವಾರಿಯರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಆಹಾರದ ಪೊಟ್ಟಣ ನೀಡುವ ಕಾರ್ಯಕ್ರಮ ಭಾನುವಾರ ನಡೆಯಿತು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸೈ ಪ್ರಸನ್ನ ಹಾಗೂ ಸಿಬ್ಬಂದಿಗೆ ಆಹಾರ ಪೊಟ್ಟಣ ನೀಡುವ ಮೂಲಕ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಳಿಕ ವೃತ್ತ ನಿರೀಕ್ಷಕರ ಕಚೇರಿ, ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಸಂಚಾರಿ ಪೊಲೀಸ್ ಠಾಣೆ ಸಹಿತ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡು, ಕೈಕಂಬದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ವಿತರಿಸಲಾಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ ಕರೋನಾ ಸಂದರ್ಭದಲ್ಲಿ ಜನರು ಮನೆಯಲ್ಲಿದ್ದಾಗ ಫ್ರಂಟ್ ಲೈನ್ ವಾರಿಯರ್ಸ್ ಗಳಾದವರೊಂದಿಗೆ ನಾವಿದ್ದೇವೆ ಎನ್ನುವ ಪ್ರೀತಿಯನ್ನು ತೋರ್ಪಡಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ್ ಮಾತನಾಡಿ ಬಂಟ್ವಾಳದಲ್ಲಿ ಎಲ್ಲಾ ಕಾರ್ಯಕರ್ತರೂ ಸೇವಾ ಮನೋಭಾವನೆಯಿಂದ ಸೇವಾ ಕಾರ್ಯಕ್ರಮಗಳನ್ನು ಜೊತೆಯಾಗಿ ನಿಂತು ಮಾಡುತ್ತಿರುವುದು ಅಭಿನಂದನೀಯ ಎಂದರು. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ, ಮಹೇಶ್ ಜೋಗಿ, ಜಿಲ್ಲಾ ಓಬಿಸಿ ಕಾರ್ಯದರ್ಶಿ ಉದಯ ಕುಮಾರ್ ಕಾಂಜಿಲ, ಜಿಲ್ಲಾ ರೈತ ಮೋರ್ಚಾ ಸದಸ್ಯ ಪ್ರೇಮನಾಥ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು, ಉಪಾಧ್ಯಕ್ಷ ಪುರುಷೋತ್ತಮ ಟೈಲರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ , ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಎಸ್ಸಿ ಮೋರ್ಚಾದ ಕೇಶವ ದೈಪಲ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಕ್ಷ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಯಶೋಧರ ಕರ್ಬೆಟ್ಟು ಮನೋಜ್ ನಿರ್ಮಲ್, ಯುವ ಮೋರ್ಚಾ ಸದಸ್ಯ ರಾಜೇಶ್ ಬೋಳಂತೂರು, ಪಂಚಾಯತಿ ಸದಸ್ಯ ನಾರಾಯಣ ಪೂಜಾರಿ, ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಸಂಚಾಲಕ ಜಯಪ್ರಕಾಶ್ ನಗ್ರಿ, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.