ಬಂಟ್ವಾಳ: ಕೋವಿಡ್ ಪ್ರಕರಣಗಳ ನಿರ್ವಹಣೆ ಹಾಗೂ ನಿಯಂತ್ರಣ ಕಾರ್ಯಗಳ ಪರಿಶೀಲನೆಯ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ಸಿ. ಶನಿವಾರ ಬಂಟ್ವಾಳ ತಾಲೂಕಿನ 2 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಹಾಯಕ ಕಮೀಷನರ್ ಅವರು ಮಂಚಿ ಹಾಗೂ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರ, ವಾಮದಪದವಿನ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದರು. ಕೇಂದ್ರಗಳಲ್ಲಿ ಸೋಂಕಿತರ ಸಂಪರ್ಕಿತರ ಪತ್ತೆ ಕಾರ್ಯ, ಎಎನ್‌ಎಂ, ಆಶಾ ಕಾರ್ಯಕರ್ತೆಯರ ಮನೆ ಭೇಟಿ, ಗಂಟಲುದ್ರವ ಸಂಗ್ರಹ ಹಾಗೂ ಅದನ್ನು ಲ್ಯಾಬ್‌ಗೆ ತಲುಪಿಸುವ ಸೌಕರ್ಯದ ಕುರಿತು ಸ್ಥಳೀಯ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್‌ಕುಮಾರ್, ಗ್ರಾಮ ಕರಣಿಕರಾದ ಯಶ್ವಿತಾ, ಅಶ್ವಿನಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.