ಬಂಟ್ವಾಳ: ಕೊರೋನಾದ ನಿಗ್ರಹಕ್ಕೆ ಸರ್ಕಾರಿ ಲಸಿಕೆ ಪಡೆದುಕೊಳ್ಳುವಂತೆ ಸರ್ಕಾರ ಎಚ್ಚರಿಸುತ್ತಿರುವ ಮಧ್ಯೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನ ವೈ.ಸಿ.ಎಸ್. ಘಟಕ ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ ಎನ್ನುವ ಘೋಷ ವಾಕ್ಯದಡಿ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಮೊಗರ್ನಾಡು ವಲಯ ವ್ಯಾಪ್ತಿಗೆ ಒಳಪಟ್ಟ ಮೊಗರ್ನಾಡ್, ಸೂರಿಕುಮೇರು, ಶಂಭೂರು, ವಿಟ್ಲ, ಪೆರುವಾಯಿ, ಸಾಲೆತ್ತೂರು, ಮಣಿಲ ಹಾಗೂ ದೇಲಂತಬೆಟ್ಟು ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಂಧುಗಳು ಕೋವಿಡ್ ಲಸಿಕೆ ಪಡೆಯುವಲ್ಲಿ ಶೇ.100 ಸಾಧನೆ ಮಾಡುವ ನಿಟ್ಟಿನಲ್ಲಿ ಸೈಂಟ್ ಜೋಸೆಫ್ ಚರ್ಚ್ ನ ವೈ.ಸಿ.ಎಸ್. ಸೂರಿಕುಮೇರು ಬೊರಿಮಾರ್ ಘಟಕ ಕಾರ್ಯಪ್ರವೃತ್ತವಾಗಿದೆ. ಈ ಯೋಜನೆಯಂತೆ ವೈ.ಸಿ.ಎಸ್. ಸೂರಿಕುಮೇರು ಘಟಕದ ಅಧ್ಯಕ್ಷೆ ರೀಮಾ ಪಿಂಟೋ 8 ಚರ್ಚ್ ನ ಧರ್ಮಗುರುಗಳಲ್ಲಿ ಜನರಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸುವಂತೆ ಮನವಿ ಮಾಡಿದ್ದು, ಅದರಂತೆ ಮೊದಲ ಹಂತದಲ್ಲಿ ಆಯಾ ಚರ್ಚ್ ಗಳ ವ್ಯಾಪ್ತಿಯಲ್ಲಿ ಅಲ್ಲಿನ ಧರ್ಮಗುರುಗಳು ಲಸಿಕೆ ಪಡೆಯುವಂತೆ ಜನತೆಯನ್ನು ವಿನಂತಿಸುವ ವೀಡಿಯೋವನ್ನು ಪ್ರತಿ ಚರ್ಚ್ ನ ಮನೆ ಮನೆಗಳಿಗೆ ವಾಟ್ಸಾಪ್ ಮುಖಾಂತರ ಕಳುಹಿಸಲಾಗಿದೆ. ವೀಡಿಯೋದಲ್ಲಿ, ಧರ್ಮಗುರುಗಳು ನನ್ನ ಒಲವಿನ ಸಹೋದರ ಸಹೋದರಿಯರೇ, ಕೋವಿಡ್ ರೋಗವನ್ನು ತಡೆಗಟ್ಟಲು ನಾನು ಲಸಿಕೆ ಪಡೆದಿರುವೆನು. ನೀವು ತೆಗೆದುಕೊಳ್ಳಿ. ನಮ್ಮ ಜೀವ ಸಂರಕ್ಷಿಸೋಣ, ಅದರ ಕಾಳಜಿ ವಹಿಸೋಣ, ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ ಮಾಸ್ಕ್ ಬಳಸಿ ಅಂತರವನ್ನು ಕಾಪಾಡಿ.. ವ್ಯಾಕ್ಸಿನ್ ಪಡೆಯೋಣ ಕೊರೋನಾ ಓಡಿಸೋಣ ಎಂದು ಕೊಂಕಣಿ ಭಾಷೆಯಲ್ಲಿ ವಿನಂತಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಲಸಿಕೆ ಪಡೆಯಲು ಪ್ರತಿಯೊಬ್ಬರೂ ನೋಂದಣಿ ಮಾಡಲು ಪ್ರೇರೇಪಿಸುವುದು, ಲಸಿಕೆ ಲಭ್ಯತೆ ಕುರಿತಾಗಿ ಕ್ರೈಸ್ತ ಕುಟುಂಬಗಳಿಗೆ ಮಾಹಿತಿ ಒದಗಿಸುವ ಕುರಿತಾಗಿ ಸೂರಿಕುಮೇರು ಚರ್ಚ್ ನ ವೈಸಿಎಸ್ ಘಟಕ ಯೋಜನೆ ರೂಪಿಸಿದೆ. ಧರ್ಮಗುರುಗಳ ವಿಡಿಯೋ ಸಂದೇಶದಿಂದ ಆರೋಗ್ಯಜಾಗೃತಿ ಸಾಧ್ಯವಾಗುತ್ತದೆ ಎಂದ ವೈ.ಸಿ.ಎಸ್. ಸೂರಿಕುಮೇರು ಘಟಕದ ಸಚೇತಕಿ ಅನಿತಾ ರೋಷನ್ ಮಾರ್ಟಿಸ್ ಈ ಅಭಿಯಾನಕ್ಕೆ ಚಾಲನೆ ನೀಡಿದ ಎಂಟು ಚರ್ಚ್ ನ ಧರ್ಮಗುರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಲಸಿಕೆ ಪಡೆಯುವ ಬಗ್ಗೆ ಜಾಗೃತಿಯನ್ನು ಮೂಡಿಸುವ ವೈ.ಸಿ.ಎಸ್. ಸೂರಿಕುಮೇರು ಬೊರಿಮಾರ್ ಘಟಕದ ವಿದ್ಯಾರ್ಥಿಗಳ ಈ ಅಭಿಯಾನದ ಕುರಿತಾಗಿ ಮೊಗರ್ನಾಡ್ ವಲಯದ ಎಲ್ಲಾ ಚರ್ಚ್ ಗಳ ವ್ಯಾಪ್ತಿಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.