ಬಂಟ್ವಾಳ: ಕೊರೊನಾ ಮಾರ್ಗಸೂಚಿಯನ್ವಯ ಸೋಮವಾರ ಕರ್ಫ್ಯೂ ಇರದಿದ್ದ ಕಾರಣ, ಬಂಟ್ವಾಳ ತಾಲೂಕಿನ ಬಹುತೇಕ ಕಡೆಗಳಲ್ಲಿ ಜನಸಂಚಾರ ಸಹಜ ಸ್ಥಿತಿಯಲ್ಲಿತ್ತು. ಬಸ್ಸು, ಆಟೊಗಳು ಓಡಾಡಿದರೆ, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಜನಸಂಚಾರ ಎಂದಿನಂತೆಯೇ ಕಂಡುಬಂದಿದ್ದು, ರಸ್ತೆಗಳಲ್ಲಿ ಅಲ್ಲಲ್ಲಿ ವಾಹನದಟ್ಟಣೆಯಿಂದ ಟ್ರಾಫಿಕ್ ಜಾಮ್ ಕೂಡಾ ತಲೆದೋರಿದವು. ಇನ್ನು, ಅಂಗಡಿ, ಮುಂಗಟ್ಟುಗಳಲ್ಲಿ ಯಾವುದನ್ನು ತೆರೆಯುವುದು ಎಂಬ ಕುರಿತು ಕೆಲವರಲ್ಲಿ ಗೊಂದಲಗಳೂ ಮೂಡಿಬಂದವು. ಕಂದಾಯ, ಪುರಸಭೆ, ಪೊಲೀಸ್ ಅಧಿಕಾರಿಗಳು ಅಲ್ಲಲ್ಲಿ ಗಸ್ತು ತಿರುಗಿ ಕೋವಿಡ್ ನಿಯಮ ಉಲ್ಲಂಘಿಸುವವರನ್ನು ಎಚ್ಚರಿಸುವ ಕೆಲಸ ಮಾಡಿದರು. ಸಂಜೆಯ ವೇಳೆ ರಾಜ್ಯ ಸರ್ಕಾರ ಸಂಪೂರ್ಣ ಕಟ್ಟುನಿಟ್ಟಿನ ಜಾರಿ ಹೊರಡಿಸಿರುವ ಹಿನ್ನೆಲೆಯಲ್ಲಿ ದಿನಸಿ ಸಾಮಗ್ರಿ ಖರೀದಿಯತ್ತ ಜನರು ಮುಖ ಮಾಡಿದರು.