ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ನಡೆಯಿತು. ಬಂಟ್ವಾಳ, ಬಿ.ಸಿ.ರೋಡ್, ಕೈಕಂಬ, ಮೇಲ್ಕಾರ್ ಸಹಿತ ಹಲವೆಡೆ ತಂಡಗಳಲ್ಲಿ ಅಧಿಕಾರಿಗಳು ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಸಲಹೆ ನೀಡಿ, ತಪ್ಪಿದವರಿಗೆ ದಂಡ ವಿಧಿಸುತ್ತಿದ್ದರು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕ ಜಯಶಂಕರ ಪ್ರಸಾದ್ ಸಹಿತ ಇತರ ಅಧಿಕಾರಿಗಳೊಂದಿಗೆ ಹೋಂ ಗಾರ್ಡ್ ಗಳು ಸಹಕಾರ ನೀಡಿದರು. ಈ ಸಂದರ್ಭ ಕೆಲವೆಡೆ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ದಂಡ ವಿಧಿಸಿದಾಗ, ಮಳಿಗೆ ಮಾಲೀಕರು ಆಕ್ಷೇಪ ಸಲ್ಲಿಸಿದರು. ನಾವು ಎಷ್ಟು ಹೇಳಿದರೂ ಸಾರ್ವಜನಿಕರು ಗುಂಪುಗೂಡಿ ಬರುತ್ತಾರೆ ಎಂದು ಅಂಗಡಿ ಮಾಲೀಕರು ಮುಖ್ಯಾಧಿಕಾರಿಗೆ ತಿಳಿಸಿದರು. ಅಂಗಡಿ ಮಾಲಕರು ಅಂಗಡಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಬೇಕು. ಗ್ರಾಹಕರು ಮಾಸ್ಕ್ ಧರಿಸದಿದ್ದರೆ ಅಂಗಡಿ ಮಾಲಕರಿಗೆ ದಂಡ ವಿಧಿಸುವುದರ ಜೊತೆಗೆ ಉದ್ದಿಮೆ ಪರವಾನಿಗೆಯನ್ನು ರದ್ದು ಮಾಡಲಾಗುವುದು. ಸ್ಯಾನಿಟೈಸರ್ ಬಳಸುವಂತೆ ಗ್ರಾಹಕರಿಗೆ ಸೂಚಿಸಿ. ಸರಕಾರದ ನಿಯಮದಂತೆ ಮುಂಜಾಗೃತೆಯನ್ನು ಪಾಲಿಸಿ ಎಂಬ ಸೂಚನೆಯನ್ನು ನೀಡಲಾಯಿತು.