ಬಂಟ್ವಾಳ

ಫೆ.16ರಿಂದ ಸಮಸ್ತ ಸಂದೇಶ ಕ್ಯಾಂಪೇನ್

ಬಂಟ್ವಾಳ: ಯುವಜನಾಂಗ ಅಕ್ರಮ, ಅನೈತಿಕ, ಅನ್ಯಾಯ, ಧರ್ಮ ವಿರೋಧಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕರ್ನಾಟಕ ಮುಶಾವರದಿಂದ ಫೆಬ್ರವರಿ 16ರಿಂದ ‘ಆದರ್ಶ ಪ್ರಭುದ್ಧತೆ, ಆಧ್ಯಾತ್ಮಿಕ ಪ್ರಭೆ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆ ಫೆ.16ರಂದು ಸಂಜೆ 4 ಗಂಟೆಗೆ ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದ್ದು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಅಲವಿ ದಾರಿಮಿ ಕುಝಿಮಣ್ಣ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಲಯಗಳಲ್ಲಿ ಮೊಹಲ್ಲಾ‌ ಮುಲಾಕಾತ್, ಯುವಪೀಳಿಗೆ ಕೆಟ್ಟ ಚಟುವಟಿಕೆಗಳಿಂದ ಮುಕ್ತಿ ಹೊಂದುವಂತಾಗಲು ತಝ್ಕಿಯತ್ ಕ್ಯಾಂಪ್, ವ್ಯಕ್ತಿತ್ವ ವಿಕಸನ ಶಿಬಿರ, ಲೀಡರ್ಸ್ ಮೀಟ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ಹಲವಾರು ವಾಗ್ಮಿಗಳು ಭಾಷಣ ಮಾಡಲಿದ್ದು ರಾಜ್ಯದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ, ಧಾರ್ಮಿಕ ನೇತಾರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಹದಿನೈದು ದಿನಗಳ ಈ ಅಭಿಯಾನದಲ್ಲಿ ಸಮುದಾಯದ ಜನರಿಂದ ಸಂಗ್ರಹವಾಗುವ ಸಲಹೆ, ಸೂಚನೆಗಳನ್ನು ಪಡೆದು ಮುಂದಿನ ಕಾರ್ಯಕ್ರಮದ ರೂಪುರೇಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಲ್‌.ಉಮರ್ ದಾರಿಮಿ ಪಟ್ಟೋರಿ, ಅಬೂಬಕರ್ ಸಿದ್ದೀಕ್ ದಾರಿಮಿ‌ ಕಡಬ, ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಕೆ.ಎಂ.ಖಾಸಿಂ ದಾರಿಮಿ ತೋಡಾರು, ಎಸ್.ಐ.ಹನೀಫ್ ದಾರಿಮಿ ಸವಣೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
NEWSDESK