ಬಂಟ್ವಾಳ: ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ನಲ್ಲಿ ಯಕ್ಷಮಿತ್ರರು ಕೈಕಂಬ ಆಶ್ರಯದಲ್ಲಿ ನಡೆದ 12ನೇ ವರ್ಷದ ಯಕ್ಷಗಾನ ಕಾರ್ಯಕ್ರಮದ ಸಂದರ್ಭ ಹಿರಿಯ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರನ್ನು ಉದ್ಯಮಿ ಮನೋಹರ ಶೆಟ್ಟಿ ಕೋಡಿಬೆಟ್ಟು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಅವರು ತನ್ನ ಗುರುಗಳಿಂದ ರಂಗಸ್ಥಳದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತೆ, ಚಪ್ಪಾಳೆ ಬೀಳುತ್ತದೆ ಎಂದು ಪಾತ್ರೋಚಿತವಲ್ಲದ ಅರ್ಥಗಾರಿಕೆ ಮಾಡುವುದು ಯಕ್ಷಗಾನಕ್ಕೆ ಉಚಿತವಲ್ಲ ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್, ಯಕ್ಷಗಾನ ಕಲೆ ಇಂದು ಜನಪ್ರಿಯವಾಗಿದ್ದು, ಯುವ ಸಮೂಹವೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು. ಯಕ್ಷಮಿತ್ರರು ಕೈಕಂಬ ಬಳಗದ ಭುಜಂಗ ಸಾಲಿಯಾನ್, ಶಂಕರ ಶೆಟ್ಟಿ, ಸದಾಶಿವ ಕೈಕಂಬ, ರಂಗೋಲಿ ಹೋಟೆಲ್ ಮಾಲೀಕರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಮಿತ್ರರು ಕೈಕಂಬದ ಕಿಶೋರ್ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಶ್ರೀಕೃಷ್ಣ ತುಲಾಭಾರ, ಶೂರ್ಪನಖಾ ವಿವಾಹ, ಅಹಿರಾವಣ ಮಹಿರಾವಣ ಎಂಬ ಕಥಾಭಾಗವನ್ನು ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಆಡಿತೋರಿಸಿದರು.