ಬಂಟ್ವಾಳ: ರಾಜ್ಯ ರೈತ ಸಂಘ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಅರಳ, ಪಂಜಿಕಲ್ಲು, ನೀರಪಲ್ಕೆ, ಸೊರ್ನಾಡು, ಲೊರೆಟ್ಟೊ ಸಹಿತ ವಿವಿಧ ಭಾಗಗಳ ರೈತರು ಹಾಗೂ ಕೇರಳಕ್ಕೆ ಉಡುಪಿ ಜಿಲ್ಲೆಯಿಂದ ವಿದ್ಯುತ್ ಲೈನ್ ವಿರುದ್ಧ ಪ್ರತಿಭಟನೆಯನ್ನು ಮಂಗಳವಾರ ನಡೆಸಿದರು. ಸರ್ವೆ ಮಾಡಿದ ಗುರುತುಗಳನ್ನು ಅಗೆದು ತೆಗೆಯಲಾಯಿತು. ಇದೇ ಸಂದರ್ಭ ನಮ್ಮ ಭೂಮಿಯನ್ನು ಯಾರಿಗೂ ಕೊಡುವುದಿಲ್ಲ ಎಂಬ ಘೋಷಣಾ ಫಲಕವನ್ನು ಸೇರಿದ್ದ ರೈತರು ನೆಟ್ಟರು.
ಈ ಸಂದರ್ಭ ಮಾತನಾಡಿದ ರಾಜ್ಯ ರೈತಸಂಘ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಇಂಥ ದೊಡ್ಡಮಟ್ಟದ 400 ಕೆವಿ ವಿದ್ಯುತ್ ಪ್ರಸರಣ ಲೈನ್ ನ್ನು ಕೃಷಿ ಭೂಮಿಯ ಮೇಲೆ ಹಾದುಹೋಗಲು ಮಾರ್ಕಿಂಗ್ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ದ.ಕ.ಜಿಲ್ಲಾ ರೈತಸಂಘ ಅಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್ ಮಾತನಾಡಿ, ಇಂಥ ದೊಡ್ಡ ಮಟ್ಟದ ಯೋಜನೆಗೆ ರೈತರು ಸಂತ್ರಸ್ತರಾಗುವ ವೇಳೆ ಅವರಿಗೆ ಯಾವುದೇ ಮಾಹಿತಿ ನೀಡದೆ ಹೇಗೆ ಜಾರಿ ಮಾಡಲು ಅನುಮತಿ ದೊರಕಿತು ಎಂದು ಪ್ರಶ್ನಿಸಿ, ರೈತರ ಮೇಲೆ ದಬ್ಬಾಳಿಕೆ ನೀತಿಯನ್ನು ಆಳುವ ವರ್ಗ ನಡೆಸುತ್ತಾ ಬಂದಿದೆ ಎಂದರು. ಇಂಥದ್ದು ಮುಂದುವರಿದರೆ ನಮ್ಮ ಪ್ರಾಣವನ್ನೂ ಕೊಡಲು ಲೆಕ್ಕಿಸುವುದಿಲ್ಲ ಎಂದು ಅವರು ಹೇಳಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪ್ರೇಮಾನಾಥ ಶೆಟ್ಟಿ ಬಾಳ್ತಿಲ ಮಾತನಾಡಿ ಟವರ್ ಗಳನ್ನು ಅಳವಡಿಸಲು ಮಾಡಿರುವ ಗುರುತುಗಳನ್ನು ಕಿತ್ತೆಸೆದು ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆದಿದೆ ಎಂದರು. ಹೋರಾಟ ಸಮಿತಿಯ ಸಂಚಾಲಕ ರೊಯ್ ಕಾರ್ಲೊ ಪ್ರತಿಭಟನೆ ಉದ್ದೇಶ ವಿವರಿಸಿದರು. ಕೆ.ಎಚ್. ಖಾದರ್ ಅರಳ, ಕನ್ಸೆಪ್ಟಾ ಡೇಸಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.