ಬಂಟ್ವಾಳ: ಉಡುಪಿ- ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅತಂಕಿತ ಸಂತ್ರಸ್ತರು ರೈತಸಂಘದ ಅಶ್ರಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಕುರಿತು ಬಂಟ್ವಾಳದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್, ಹೋರಾಟದ ಮೊದಲ ಹಂತವಾಗಿ ಜ.26 ರಂದು ಬೆಳಗ್ಗೆ 8 ಗಂಟೆಗೆ ಬಂಟ್ವಾಳಕ್ಕೆ ಸಮೀಪದ ಸೋರ್ನಾಡಿನಿಂದ ನಾಲ್ಕು ಗ್ರಾಮಗಳ ಮುಖ್ಯ ದ್ವಾರಗಳಲ್ಲಿ ಈ ಯೋಜನೆಯನ್ನು ವಿರೋಧಿಸಿ ವಿವಿಧ ಬರಹದ ನಾಮಫಲಕ ಹಾಕುವ ಮೂಲಕ ಚಳವಳಿಗೆ ಚಾಲನೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದರು. ಅಂದು ಬೆಳಿಗ್ಗೆ ಯುಪಿಸಿಎಲ್ ಅನಧಿಕೃತವಾಗಿ ಸರ್ವೇ ನಡೆಸಿ ಹಾಕಿರುವ ಗುರುತುಗಳನ್ನು ತೆರವುಗೊಳಿಸಿ ನಮ್ಮ ಭೂಮಿ-ನಮ್ಮ ಹಕ್ಕು ಅನ್ಯರಿಗೆ ಮಾರಾಟಕ್ಕಿಲ್ಲ, ಕಾರ್ಪೊರೇಟ್ ಕಂಪೆನಿಗಳಿಗೆ,ವಿದ್ಯುತ್ ಪ್ರಸರಣಾ ಸಂಸ್ಥೆಗಳಿಗೆ ಮತ್ತು ಭೂ ದಲ್ಲಾಳಿಗಳಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ಸ್ಲೋಗನ್ ನಾಮಫಲಕವನ್ನು ಹಾಕಿ ಪ್ರತಿಭಟಿಸಲಾಗುವುದು ತಾಲೂಕಿನ ಪಂಜಿಕಲ್ಲು, ಅರಳ,ಬಿ.ಕಸ್ಭಾ ಮತ್ತು ಅಮ್ಟಾಡಿ ಗ್ರಾಮಗಳಲ್ಲಿ ಈಗಾಗಲೇ ಜನರ ಅನುಮತಿಯಿಲ್ಲದೆ ಅನಧಿಕೃತವಾಗಿ ಗೂಗುಲ್ ಮೂಲಕ ಸರ್ವೇ ಕಾರ್ಯನಡೆಸಿ ಗಡಿಗುರುತನ್ನು ಹಾಕಲಾಗಿದೆ.ಸ್ಥಳೀಯಾಡಳಿತ ಸಂಸ್ಥೆಗಳಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದು,ಗ್ರಾಮಸ್ಥರು,ರೈತರು ಆತಂಕಿತರಾಗಿದ್ದಾರೆ ಎಂದರು. ಯೋಜನೆಯಿಂದ ಜಿಲ್ಲೆಯ ಕೃಷಿ, ಅರಣ್ಯ ಸಂಪತ್ತು ಮತ್ತು ಜನಜೀವನದ ಮೇಲೆ ದುಪ್ಪರಿಣಾಮ ಬೀರಲಿದೆ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಇಂಥ ಯೋಜನೆ ಅನುಷ್ಠಾನ ಮಾಡಲು ಬಿಡಬಾರದು. ರೈತಸಂಘ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು. ಈಗಾಗಲೇ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಇದರ ವಿರುದ್ದ ಕಾನೂನು ಮತ್ತು ಜನಪರ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿಯವರನ್ನು ಕೂಡ ರೈತರ ನಿಯೋವ ಭೇಟಿಯಾಗಿ ಚರ್ಚಿಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ರೋಯ್ ಕಾರ್ಲೋ,ಸದಸ್ಯರಾದ ದೇವಪ್ಪ ಕುಲಾಲ್, ಕೆ.ಎಚ್.ಖಾದರ್ ಅರಳ, ಕನ್ಸೆಪ್ಟಾ ಡೆಸಾ ಮತ್ತಿತರರು ಉಪಸ್ಥಿತರಿದ್ದರು.