ಬಂಟ್ವಾಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಂಟ್ವಾಳದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ 19 ಲಸಿಕಾ ಕಾರ್ಯಕ್ರಮ ಯೋಜನೆಯ ಪೂರ್ವಭಾವಿಯಾಗಿ ಅಣಕು ತಯಾರಿಯ ಪೂರ್ವಾಭ್ಯಾಸ ಶುಕ್ರವಾರ ನಡೆಯಿತು.,
ಆಸ್ಪತ್ರೆಯ ಸುಮಾರು 25ರಷ್ಟು ಸಿಬ್ಬಂದಿ ಈ ಅಭ್ಯಾಸದಲ್ಲಿ ಪಾಲ್ಗೊಂಡರು. ಈ ಸಂದರ್ಭ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತುಫೈಲ್ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡರು. ದಕ್ಷಿಣ ಕನ್ನಡ ಜಿಲ್ಲೆಯ 8 ಕಡೆಗಳಲ್ಲಿ ಏಕಕಾಲದಲ್ಲಿ ಈ ಅಣಕು ಅಭ್ಯಾಸ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಕೋವಿಡ್ ಲಸಿಕೆ ನೀಡುವ ವೇಳೆ ಯಾವ ಸಿದ್ಧತೆಗಳನ್ನು ಮಾಡಬೇಕು ಎಂಬ ಕುರಿತು ಅಭ್ಯಸಿಸಲಾಯಿತು. ಪ್ರಥಮ ಹಂತಕ್ಕೆ ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ 2223 ಮಂದಿಗೆ ಲಸಿಕೆ ನೀಡಲು ನೋಂದಣಿ ಆಗಿರುತ್ತದೆ. ಇವರೆಲ್ಲರೂ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವೆಯಲ್ಲಿರುವ ವೈದ್ಯರು, ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾಗಿರುತ್ತಾರೆ. ಮುಂದಿನ ಹಂತದಲ್ಲಿ ಉಳಿದವರಿಗೆ ಲಸಿಕೆ ನೀಡುವ ಕುರಿತು ಸರ್ಕಾರದ ಸೂಚನೆಗಳನ್ವಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಂದು ಅಣಕು ಅಭ್ಯಾಸ ನಡೆದಿರುವುದಾಗಿ ಡಾ. ದೀಪಾ ಪ್ರಭು ತಿಳಿಸಿದರು.