ಬಂಟ್ವಾಳ: ತಾಲೂಕಿನ 57 ಗ್ರಾಪಂಗಳಿಗೆ ಮಂಗಳವಾರ ನಡೆಯುವ ಮತದಾನಕ್ಕೆ ತಾಲೂಕಾಡಳಿತ ಸಿದ್ಧಗೊಂಡಿದೆ. ಈಗಾಗಲೇ 396 ಮತಗಟ್ಟೆಗಳಿಗೆ ಮತಪೆಟ್ಟಿಗೆಗಳು ಬಂದಿವೆ. ಬ್ಯಾಲೆಟ್ ಪೇಪರ್ ಗಳೂ ಸಿದ್ಧವಾಗಿವೆ. ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಬೇಕಾಗುವ ಚುನಾವಣಾ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ಪರಿಶೀಲನೆ ಮಾಡಿಕೊಂಡು ಸಂಜೆ ತಲುಪಿದ್ದಾರೆ. ಗ್ರಾಪಂ ಚುನಾವಣೆಗೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದು ಜನತೆಯಲ್ಲಿ ವಿನಂತಿಸುತ್ತೇನೆ ಎಂದು ಬಂಟ್ವಾಳದಲ್ಲಿ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ಆಗಮಿಸಿದ ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ಹೇಳಿದರು.
ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮೊದಲ ಹಂತದ ಮತದಾನ ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ 57 ಗ್ರಾಮ ಪಂಚಾಯಿತಿಗಳ 822 ಸ್ಥಾನಗಳಿಗೆ ನಡೆಯಲಿದ್ದು, ಒಟ್ಟು 2,75,097 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ನ ಮೊಡಂಕಾಪುವಿನಿಂದ 155 ವಾಹನಗಳಲ್ಲಿ ಪ್ರತಿಯೊಂದು ಬೂತ್ ಗೆ ತಲಾ 6ರಂತೆ ಒಟ್ಟು 2376 ಮಂದಿ ತಮಗೆ ನಿಗದಿಪಡಿಸಲಾಗಿರುವ ಬೂತ್ ಗಳಿಗೆ ಸೋಮವಾರ ತೆರಳಿದ್ದಾರೆ. ತಾಲೂಕಿನ 57 ಗ್ರಾ.ಪಂ.ಗಳ 837 ಸ್ಥಾನಗಳ ಪೈಕಿ, 15 ಸ್ಥಾನಗಳ ಅವಿರೋಧ ಆಯ್ಕೆ ಆಗಿದ್ದು, 822 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿಸೂಕ್ಷ್ಮ, 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಪ್ರತಿ ಮತಗಟ್ಟೆಗಳಲ್ಲಿ ತಲಾ 6 ಮಂದಿಯಂತೆ ಸುಮಾರು 2376 ಸಿಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. 2,75,097 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸೋಮವಾರ ಇನ್ ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಕೇಂದ್ರದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಮತಗಟ್ಟೆ ಸಿಬಂದಿ ಆಯಾಯ ಮತಗಟ್ಟೆಗಳಿಗೆ ತೆರಳುವ ದೃಷ್ಟಿಯಿಂದ 155 ವಾಹನಗಳನ್ನು ನಿಗದಿ ಪಡಿಸಲಾಗಿತ್ತು. ಮತಪೆಟ್ಟಿಗೆಗಳ ಸಾಗಾಟ ಕಾರ್ಯವನ್ನು ಸಹಾಯಕ ಕಮೀಷನರ್ ಮದನ್ ಮೋಹನ್ ಪರಿಶೀಲಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಸೀಲ್ದಾರ್ ಅನಿತಾಲಕ್ಷ್ಮಿ, ಚುನಾವಣಾ ಶಾಖೆ ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ದಿವಾಕರ್ ಮುಗುಳ್ಯ, ಚುನಾವಣಾ ಶಾಖೆಯ ಸಿಬ್ಬಂದಿ ರಾಜ್ ಕುಮಾರ್ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಎಸ್ಸೈಗಳಾದ ಅವಿನಾಶ್, ವಿನೋದ್ ರೆಡ್ಡಿ, ಸೌಮ್ಯಾ, ಪ್ರಸನ್ನ, ಕಲೈಮಾರ್, ಸಂಜೀವ ಅವರ ಮುಂದಾಳತ್ವದಲ್ಲಿ ಸಿಬ್ಬಂದಿ ಕೆಎಸ್ಸಾರ್ಪಿ ತುಕಡಿಗಳೊಂದಿಗೆ ಈಗಾಗಲೇ ಬಂದೋಬಸ್ತ್ ನಡೆಸುತ್ತಿವೆ.