ಬಂಟ್ವಾಳ:ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಗೆ ಎಂ.ಆರ್.ಪಿ.ಎಲ್.ನ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ತರಗತಿ ಕೊಠಡಿ ಹಾಗೂ ಶೌಚಾಲಯವನ್ನು ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರಕಾರ ಹಲವು ರೀತಿಯ ಅನುದಾನ ನೀಡುತ್ತಿದ್ದು, ಇದರ ಜತೆಗೆ ಎಂ.ಆರ್.ಪಿ.ಎಲ್.ನಂತಹ ಸಂಸ್ಥೆಗಳು ಕೂಡ ಶಿಕ್ಷಣಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಕುದ್ರೆಬೆಟ್ಟು ಶಾಲೆಯ ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಹಾಗೂ ತಾ.ಪಂ.ಸದಸ್ಯೆ ಲಕ್ಷ್ಮೀ ಗೋಪಾಲಾಚಾರ್ಯ, ಎಂ.ಆರ್.ಪಿ.ಎಲ್.ನ ಹಣಕಾಸು ಅಧಿಕಾರಿ ಅಪರ್ಣಾ ಎಂ.ನಾಯಕ್, ಸಿ.ಎಸ್.ಆರ್.ವಿಭಾಗದ ಮುಖ್ಯಸ್ಥೆ ವೀಣಾ, ಸಿಬಂದಿ ವಿಕ್ರಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಆಗಮಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ನಾಗೇಶ್, ದಾನಿಗಳಾದ ಮಹಮ್ಮದ್ ನಾಸೀರ್, ಸಿ.ಕೆ.ನವಾಜ್ ಹಾಗೂ ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತ, ಬಿ.ಆರ್.ಸಿ. ಸುರೇಖಾ, ಸಿ.ಆರ್.ಪಿ. ಸತೀಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನೀಲ್, ಅಬ್ದುಲ್ ಶುಕುರ್ ಸಾಹೇಬ್, ಲೋಕಾನಂದ ಏಳ್ತಿಮಾರ್, ಶಿಕ್ಷಕಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಚೇತನಾಕುಮಾರಿ ಸಿ.ಎನ್. ಸ್ವಾಗತಿಸಿದರು. ಶಿಕ್ಷಕಿ ರೇಖಾ ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂತೋಷ್ ಕುಮಾರ್ ಬೊಳ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಅಮರನಾಥ್ ಸಹಕರಿಸಿದರು.