ಕೊರೊನಾ ಪ್ರಮಾಣ ಇಳಿಮುಖ ಎಂದು ಅಂಕಿಅಂಶಗಳು ಹೇಳುತ್ತಿದ್ದರೂ ಪೂರ್ಣವಾಗಿ ಹೋಗಿಲ್ಲ. ಆದರೆ ನಾವು ಕೊರೊನಾದ ಜೊತೆ ಸಾರ್ವಜನಿಕವಾಗಿ ಯಾವ ರೀತಿ ವರ್ತಿಸಬೇಕು ಎಂಬುದನ್ನು ಮರೆಯುತ್ತಿದ್ದೇವೆ. ಆಡಳಿತ ಸಾರಿ ಸಾರಿ ಹೇಳಿದ್ದು ಒಂದೇ ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ. ಇದಕ್ಕೆವಿರುದ್ಧವಾಗಿ ಅಕ್ಷರಶಃ ಪಾಲಿಸುತ್ತೇವೆ ಎಂದು ಹಠ ತೊಟ್ಟರೆ ಏನು ಮಾಡುವುದು? ವಿದೇಶಗಳಲ್ಲಾದರೆ ತೆಪ್ಪಗೆ ಅವರು ಹೇಳಿದ ಕಾನೂನನ್ನೆಲ್ಲಾ ಪಾಲಿಸುವ ನಾವು ಊರಲ್ಲಿ ತದ್ವಿರುದ್ಧ. ಇದು ಕೊರೊನಾ ಎಂಬ ಹೆಸರು ಕಾಣಿಸಿಕೊಳ್ಳುವ ಮೊದಲೂ ಇದ್ದ ಪದ್ಧತಿ. ಲಾಕ್ ಡೌನ್ ಬಂದಾಗ ಜನರಲ್ಲಿ ಜಾಗೃತಿ ಮೂಡಿತೇನೋ ಎಂದು ಭಾವಿಸಿದರೆ ಉಹುಂ.. ಇಲ್ಲ. ಬೀದಿ ಬೀದಿಗಳಲ್ಲಿ ಕಸ ಎಸೆಯುವುದು, ಉಗುಳುವುದು ಮೊದಲಿನಂತಾಯಿತು. ಶಾಲೆ, ಕಾಲೇಜುಗಳಿಲ್ಲ ಎಂಬುದನ್ನು ಬಿಟ್ಟರೆ ಈಗೆಲ್ಲವೂ ಮೊದಲಿನಂತೆ. ನಾವು ಖರೀದಿ ಮಾಡುವ 10 ರೂ ಪೆನ್ ಗೂ ತೆರಿಗೆ ಕಟ್ಟುತ್ತೇವೆ. ಇಂಥ ಸಣ್ಣ ತೆರಿಗೆ ಹಣವೇ ಸಹಸ್ರ ಲಕ್ಷ, ಕೋಟಿಗಳಾಗುತ್ತವೆ. ಇದೇ ತೆರಿಗೆ ಹಣವನ್ನು ‘ಬಿಡುಗಡೆ’ ಮಾಡಲಾಗುತ್ತದೆ. ತಮ್ಮ ಪಾಡಿಗೆ ನಿಯತ್ತಾಗಿ ತೆರಿಗೆ ಕಟ್ಟಿ, ಸರ್ಕಾರ ಸೂಚಿಸಿದ್ದೆಲ್ಲವೂ ಪಾಲಿಸಿ, ತಮ್ಮಷ್ಟಕ್ಕೆ ವಾಸಿಸುವ ನಾಗರಿಕರಾದವರು ತಲೆ ಮೇಲೆ ಕೈ ಇಟ್ಟು ನೋಡುವ ಪರಿಸ್ಥಿತಿ. ನಾವೆಲ್ಲರೂ ಬಯಸುವುದೇನೆಂದರೆ…
ಕೊರೊನಾ ಹೋಗಲಿಲ್ಲ ಎಂಬುದು ಜ್ಞಾಪಕದಲ್ಲಿರಲಿ. ಇಂಥದ್ದೊಂದು ಗಂಡಾಂತರ ಬರಬಹುದು ಎಂಬ ಪ್ರಜ್ಞೆ ಅಗತ್ಯ.ನಿಯಮಪಾಲನೆ ಎಲ್ಲರಿಗೂ ಸಮಾನವಾಗಿರಲಿ. ಗುರ್ತ ಇದ್ದವರಿಗೆ, ಪ್ರಭಾವಿಗಳಿಗೆ ಪ್ರತ್ಯೇಕ ಎಂದೇನೂ ಬೇಡ. ಗ್ರಾಮ ಪಂಚಾಯಿತಿ, ಪುರಸಭೆ ಸಹಿತ ಹಳ್ಳಿಯಿಂದ ಡಿಲ್ಲಿಯವರೆಗೂ ನಮ್ಮನ್ನು ಪ್ರತಿನಿಧಿಸಲೆಂದು, ನಮ್ಮ ಪರವಾಗಿ ಮಾತನಾಡಲೆಂದು ಆಯ್ಕೆಯಾದವರ ಭರವಸೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಈಗ ಈಡೇರಿಸುವ ಕಾಲ. ಅದಕ್ಕೊಂದು ಸಮಯದ ಮಿತಿಯನ್ನು ನಿಶ್ಚಯಿಸಲಿ. ನಿಮ್ಮೆಲ್ಲರ ದೃಷ್ಟಿಕೋನ ಸಕಾರಾತ್ಮಕವಾಗಿದ್ದರೆ, ಜನಸಾಮಾನ್ಯರಾದ ನಮ್ಮ ಬದುಕು ಸುಭದ್ರವಾಗುತ್ತದೆ. ನಮ್ಮ ಬದುಕಿನಲ್ಲೂ ಹೊಸ ಆಶಾಕಿರಣ ಮೂಡುತ್ತವೆ. ಇನ್ನೊಂದು ಲಾಕ್ ಡೌನ್ ನಮಗೆ ಬೇಡ. ಅಥವಾ ನಮ್ಮ ಬದುಕಿನ ಶೈಲಿಯನ್ನು ಬದಲಾಯಿಸೋಣ. ನಾನು ಒಂದು ಮಾತು ಹೇಳಿದರೆ, ಸಾವಿರಾರು ಜನರು ಕೇಳುತ್ತಾರೆ ಎಂದು ಹೇಳಿಕೊಳ್ಳುವವರು ಇಂದು ಮುಂದೆ ಬಂದು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಿದರೆ ಖಂಡಿತವಾಗಿಯೂ ಇದು ಸಾಧ್ಯ. ಮುಂದೆ ದೀಪಾವಳಿ ಇದೆ. ಅದಾದ ತಿಂಗಳೆರಡರಲ್ಲೇ 2021ಕ್ಕೆ ಕ್ಯಾಲೆಂಡರ್ ಹಾಳೆ ಮಗುಚುತ್ತದೆ. ಎಲ್ಲರಿಗೂ ಒಳಿತಾಗಲಿ. ಇದು 5ನೇ ವರ್ಷಕ್ಕೆ ಕಾಲಿಟ್ಟ ಬಂಟ್ವಾಳನ್ಯೂಸ್ ಆಶಯವೂ ಹೌದು. – ಹರೀಶ ಮಾಂಬಾಡಿ, ಸಂಪಾಧಕ
2016, ನವೆಂಬರ್ 10ರಂದು ಆರಂಭಗೊಂಡ www.bantwalnews.com ನಾಲ್ಕು ವರ್ಷಗಳ ಪುಟ್ಟ ಜರ್ನಿಯನ್ನು ಮುಗಿಸಿ, ಇಂದು 5ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಈ ವೆಬ್ ಸೈಟ್ ಅನ್ನು ವೀಕ್ಷಿಸಿದ್ದು, ಐದನೇ ವರ್ಷಕ್ಕೆ ಮುನ್ನಡೆಯಲು ಧೈರ್ಯ ಕೊಟ್ಟಿದೆ. ಸಕಾಲದಲ್ಲಿ ಪ್ರೋತ್ಸಾಹ ನೀಡುವ ಸ್ನೇಹಿತರು, ಜಾಹೀರಾತುದಾರರು, ಬಂಟ್ವಾಳವಷ್ಟೇ ಅಲ್ಲ, ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲೂ ಇದನ್ನು ಕ್ಲಿಕ್ ಮಾಡಿ ನೋಡುವ ನಮ್ಮೂರ ಬಂಧುಗಳು ಇದಕ್ಕೆ ಕಾರಣ. ಬಂಟ್ವಾಳನ್ಯೂಸ್ ಆರಂಭಗೊಳ್ಳುವ ಹೊತ್ತಿನಲ್ಲಿ ಡಿಜಿಟಲ್ ಮೀಡಿಯಾವೂ ಆರಂಭಿಕ ಹಂತದಲ್ಲಿದ್ದವು. ಅದಾದ ಬಳಿಕ ಈಗ ವೆಬ್ ನ್ಯೂಸ್ ಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರಬಹುತ್ತಿದ್ದು, ಮಾಧ್ಯಮ ಕ್ಷೇತ್ರದ ಬದಲಾವಣೆಗೆ ದಿಕ್ಸೂಚಿಯೂ ಹೌದು. ಯಾರನ್ನೂ ಅತಿಯಾಗಿ ಹೊಗಳದೆ, ಯಾರ ವೈಯಕ್ತಿಕ ನಿಂದನಾತ್ಮಕ ಹೇಳಿಕೆಗಳಿಗೆ ವೇದಿಕೆಯಾಗದೆ, ಅಪರಾಧ ಸುದ್ದಿಗಳ ವೈಭವೀಕರಣ ಮಾಡದೆ, ಕೇವಲ ಸುದ್ದಿ ಮತ್ತು ಜನಾಶಯದ ಮಾಹಿತಿಗಳನ್ನು ಹಂಚುವುದಷ್ಟೇ ಬಂಟ್ವಾಳನ್ಯೂಸ್ ನ ಧ್ಯೇಯ. ಇದರಲ್ಲಿ ಬದಲಾವಣೆ ಇಲ್ಲ. ಎಲ್ಲರಿಗೂ ನಮಸ್ಕಾರ.