ಪ್ರಮುಖ ಸುದ್ದಿಗಳು

ಕರ್ಣಾಟಕ ಬ್ಯಾಂಕ್ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದ ಮಾಜಿ ಅಧ್ಯಕ್ಷ ತಲೆಮೊಗರು ಅನಂತಕೃಷ್ಣ ಇನ್ನಿಲ್ಲ

ಜಾಹೀರಾತು

ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಸುದೀರ್ಘ ಕಾಲ ಸಾರಥ್ಯ ವಹಿಸಿ ಬ್ಯಾಂಕಿನ ಏಳಿಗೆಗೆ, ಆಧುನೀಕರಣಕ್ಕೆ ದೊಡ್ಡ ಕೊಡುಗೆಗೆ ಕಾರಣರಾಗಿದ್ದ ಟಿ.ಅನಂತಕೃಷ್ಣ ಇನ್ನಿಲ್ಲ. ಮಂಗಳೂರಿನಲ್ಲಿ ವಾಸಿಸುತ್ತಿದ್ದ 74  ವರ್ಷದ ಅವರು ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಪತ್ನಿ, ಪುತ್ರನನ್ನು ಅವರು ಅಗಲಿದ್ದಾರೆ.

 ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ತಲೆಮೊಗರು ಕುಟುಂಬದವರಾಗಿರುವ ಅವರು, ತಲೆಮೊಗರು ನಾರಾಯಣರಾಯರ ನಾಲ್ವರು ಪುತ್ರರಲ್ಲಿ ಹಿರಿಯವರು. ಸುಮಾರು 1993ರವರೆಗೂ ಬಿ.ಸಿ.ರೋಡಿನ ತನ್ನ ಮನೆಯಲ್ಲಿ ವಾಸಿಸುತ್ತಿದ್ದ ಅವರು ಬಳಿಕ ಮಂಗಳೂರಿಗೆ ಶಿಫ್ಟ್ ಆದರು. ಆದರೆ ಹುಟ್ಟೂರ ಸಂಪರ್ಕವನ್ನು ಸದಾ ಇರಿಸಿಕೊಂಡಿದ್ದ ಅವರು, ಸಜಿಪದಲ್ಲಿ ಶಾಖೆ ಸ್ಥಾಪಿಸುವ ಮೂಲಕ ಗ್ರಾಮೀಣ ಜನರಿಗೂ ಆಪ್ತವಾದರು.

1946ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪದ ತಲೆಮೊಗರು ಕುಟುಂಬದಲ್ಲಿ ಜನಿಸಿದ ಅನಂತಕೃಷ್ಣ, ಎಸ್.ವಿ.ಎಸ್ ಹೈಸ್ಕೂಲು ಬಂಟ್ವಾಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು.

ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಹಿಂದೂಸ್ಥಾನ್ ಎರೊನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸೇರಿದ ಅವರು 1971ರಲ್ಲಿ ಕರ್ಣಾಟಕ ಬ್ಯಾಂಕ್ ಸೇರಿದ್ದರು.

ಬ್ಯಾಂಕ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅವರು, 1994ರಲ್ಲಿ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ್ದರು. 1998ರಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ 2000 ಇಸವಿಯಲ್ಲಿ ಸಿಇಒ ಮತ್ತು ಅಧ್ಯಕ್ಷರಾಗಿ ಆಯ್ಕೆಯಾದರು. ಅತಿ ಹೆಚ್ಚು ಅವಧಿಗೆ ಬ್ಯಾಂಕೊಂದರ ಮುಖ್ಯಸ್ಥರಾಗಿ ದುಡಿದ ಖ್ಯಾತಿ ಅನಂತಕೃಷ್ಣ ಅವರದ್ದು.

ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ ಮೂಲಕ ಬ್ಯಾಂಕನ್ನು ಉನ್ನತ ಸ್ಥಾನಕ್ಕೇರಿಸಿದ ಕೀರ್ತಿ  ಅನಂತಕೃಷ್ಣ  ಅವರದ್ದು.

ಬ್ಯಾಂಕಿಂಗ್ ರಂಗಕ್ಕೆ ಸವಾಲಾದ ನಾನಾ ಸ್ಪರ್ಧೆಗಳು. ಉದಾರೀಕರಣ, ವಿಶ್ವ ವಾಣಿಜ್ಯೀಕರಣ, ವಿದೇಶಿ ಬ್ಯಾಂಕುಗಳ ಆಗಮನ-ಸ್ಪರ್ಧೆ, ಆರ್ಥಿಕ ಕ್ಷೇತ್ರದ ಸತತ ಹಿನ್ನಡೆ, ಪ್ರಾಕೃತಿಕ ವೈಪರೀತ್ಯಗಳಿಂದಾಗಿ ವಾಣಿಜ್ಯ ಕ್ಷೇತ್ರಕ್ಕಾದ ಸರಿಪಡಿಸಲಾಗದ ದುರಂತಗಳ ಹಿನ್ನೆಲೆ, ಬ್ಯಾಂಕ್ ವ್ಯವಹಾರಕ್ಕೆ ಪೆಡಂಭೂತವಾಗಿ ಇದಿರಾದ ಅನುತ್ಪಾದಕ ಸಾಲದ ಹೊರೆಗಳು ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ಅಹರ್ನಿಶಿ ದುಡಿದು ಕೇವಲ ನಾಲ್ಕು ವರ್ಷಗಳಲ್ಲಿ ಬ್ಯಾಂಕನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದರು

ಬ್ಯಾಂಕ್ ಡಿಜಿಟಲೀಕರಣಕ್ಕೆ ಅನಂತಕೃಷ್ಣ ಕೊಡುಗೆ ಅಪಾರ. ಪರಂಪರಾಗತ ಶ್ರದ್ಧೆ, ಶ್ರೀಸಾಮಾನ್ಯರ ನಿಕಟ ಸಂಪರ್ಕವನ್ನು ಎಂದಿಗೂ ತ್ಯಜಿಸಲಿಲ್ಲ. ಹೊಸತಲೆಮಾರಿನ ಬ್ಯಾಂಕುಗಳೊಂದಿಗೆ ಸ್ಪರ್ಧಿಸುವಂತಹ ಮಟ್ಟ ಮುಟ್ಟಲು ಹಳೆ ತತ್ತ್ವ ಹೊಸ ಸತ್ವಗಳ ಸಮ್ಮಿಲನದಿಂದ ಸಾಧ್ಯವಾಗಲು ಅನಂತಕೃಷ್ಣ ಪರಿಶ್ರಮ ಅಪಾರ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್ನ ನಿಕಟ ಪರಿಚಯ, ನಿಡುಗಾಲದ ಅಧ್ಯಯನ, ಸಂಶೋಧನೆ, ನಿರಂತರ ಸಂಚಾರದ ಫಲಶ್ರುತಿಯಾಗಿ ಕರ್ಣಾಟಕ ಬ್ಯಾಂಕಿಗೆ ಹೊಸ ಸ್ವರೂಪ ದೊರೆಯಿತು.  ಲಲಿತಕಲೆಗಳಲ್ಲೂ ಆಸಕ್ತರಾಗಿದ್ದ ಅನಂತಕೃಷ್ಣ, ಯಕ್ಷಗಾನ, ಸಂಗೀತವನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ತನ್ನ ಸಂಪರ್ಕಕ್ಕೆ ಬರುವ ಶ್ರೀಮಂತನಿಂದ ಜನಸಾಮಾನ್ಯನನ ಬಳಿ ಸಮಾನವಾಗಿ ವ್ಯವಹರಿಸುತ್ತಿದ್ದ ಅನಂತಕೃಷ್ಣ ಸರಳತೆ ಅನುಕರಣೀಯ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.