ಬಂಟ್ವಾಳ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಇಂದು 14 ಮನೆಗಳಿಗೆ ಹಾನಿಯುಂಟಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಇವುಗಳ ಪೈಕಿ 2 ಮನೆಗಳು ಸಂಪೂರ್ಣ ಹಾನಿಗೊಂಡರೆ, 2 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿವೆ. 9 ಮನೆಗಳು ಭಾಗಶಃ ಹಾನಿಗೊಳಗಾದರೆ, 1 ದನದ ಕೊಟ್ಟಿಗೆಗೂ ಹಾನಿಗಳುಂಟಾಗಿವೆ. ನೇತ್ರಾವತಿ ನದಿ ನೀರಿನ ಮಟ್ಟ 7.3 ಮೀಟರ್ ಇತ್ತು.
ಬಾಳ್ತಿಲ ಗ್ರಾಮದ ದೇಜು ಎಂಬವರ ಕಚ್ಚಾ ಮನೆ, ಮೇರಮಜಲು ಗ್ರಾಮದ ಶಾರದಾ ಅವರ ಮನೆ, ಕೆದಿಲ ಗ್ರಾಮದ ಗಿರಿಯಪ್ಪ ಗೌಡರ ದನದ ಕೊಟ್ಟಿಗೆ, ದೇವಸ್ಯಪಡೂರು ಗ್ರಾಮದ ತಾರಾನಾಥ ಅವರ ಮನೆ, ಕಾವಳಪಡೂರು ಗ್ರಾಮದ ಗಿರಿಜಾ ಅವರ ಮನೆ, ಕೊಳ್ನಾಡು ಗ್ರಾಮದ ಆದಂ ಕುಂಞ ಅವರ ಮನೆ, ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಅವರ ಮನೆ, ಕಳ್ಳಿಗೆ ಗ್ರಾಮದ ಸುನಂದಾ ಅವರ ಮನೆ, ಕಳ್ಳಿಗೆ ಗ್ರಾಮದ ಮನೋಹರ ಅವರ ಮನೆ, ಬಿ.ಮೂಡಗ್ರಾಮದ ಶೇಖರ ಅವರ ಮನೆ, ಸಜೀಪಮುನ್ನೂರು ಗ್ರಾಮದ ಅಮೀನಾ ಅವರ ಮನೆ, ವಿಟ್ಲಪಡ್ನೂರು ಗ್ರಾಮದ ಅಬ್ದುಲ್ ರಜಾಕ್ ಅವರ ಮನೆಗೆ ಹಾನಿಯಾಗಿದೆ.
ಇಡ್ಕಿದು ಗ್ರಾಮದ ಚೆನ್ನು ವಾಸದ ಕಚ್ಚಾ ಮನೆಯು ಭಾರಿ ಗಾಳಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಕರೋಪಾಡಿ ಗ್ರಾಮದ ಪದ್ಯಾಣ ಎಂಬಲ್ಲಿ ಪಿ.ಜಿ ಕೇಶವ ಭಟ್ ಎಂಬುವವರ ವಾಸ್ತವ್ಯದ ಪಕ್ಕಾ ಮನೆ ಹಾಗೂ ಹಟ್ಟಿಗೆ ಬೃಹತ್ ಮರ ಬಿದ್ದು, ಹಟ್ಟಿ ಸಂಪೂರ್ಣ ಹಾನಿಯಾಗಿದ್ದು, ಮನೆಗೆ ಭಾಗಶಃ ಹಾನಿಯಾಗಿದ್ದು, ಜಾನುವಾರುವಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.