ಬಂಟ್ವಾಳ: ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುವ ಸರಕಾರದ ನೂತನ ಕಾರ್ಯಕ್ರಮ ‘ಸ್ವಾಮಿತ್ವ’ಕ್ಕೆ ತಾಲೂಕಿನ ಪೆರಾಜೆ ಗ್ರಾ.ಪಂ.ನಲ್ಲಿ ಬುಧವಾರ ವಿಶೇಷ ಗ್ರಾಮಸಭೆ ನಡೆಸುವ ಮೂಲಕ ಮಾಹಿತಿ ನೀಡಿ ಚಾಲನೆ ನೀಡಲಾಯಿತು.
ಗ್ರಾಮಾಂತರ ಭಾಗಗಳಲ್ಲಿ ತಲೆತಲಾಂತರಗಳಿಂದ ದಾಖಲೆ ಹೊಂದದ ಗ್ರಾಮಸ್ಥರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಸರಕಾರ ಈ ಮೂಲಕ ಅವಕಾಶ ನೀಡಿದ್ದು, ಇದಕ್ಕಾಗಿ ಡ್ರೋಣ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹಲವು ದಶಕಗಳ ಹಿಂದೆ ಆಸ್ತಿಗಳ ದಾಖಲೆಗಳನ್ನು ಮಾಡಲಾಗಿದ್ದು, ಅದರ ಬಳಿಕ ಸರಿಯಾದ ಗಡಿ ಗುರುತು ಕಾರ್ಯ ನಡೆಯದೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸರ್ವೇ ಇಲಾಖೆಯು ಗ್ರಾ.ಪಂ.ಗಳ ಸಹಾಯದಿಂದ ಡ್ರೋಣ್ ತಂತ್ರಜ್ಞಾನದ ಮೂಲಕ ಗಡಿಗುರುತು ಕಾರ್ಯ ನಡೆಸಲಿದೆ. ಬಂಟ್ವಾಳ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ ಅವರು ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು ಡ್ರೋಣ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುವ ‘ಸ್ವಾಮಿತ್ವ’ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ.ಆಡಳಿತಾಧಿಕಾರಿ ನಂದನ್ ಶೆಣೈ , ತಾ.ಪಂ.ಸದಸ್ಯೆ ಮಂಜುಳಾ ಕುಶಲ ಉಪಸ್ಥಿತರಿದ್ದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಂಭುಕುಮಾರ ಶರ್ಮ ಸ್ವಾಗತಿಸಿ, ವಂದಿಸಿದರು.