ಬಂಟ್ವಾಳ: ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದು, ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ, ಯುವವಾಹಿನಿಯನ್ನು ಬೆಳೆಸುವ ಮೂಲಕ ಬಿ.ತಮ್ಮಯರು ಯುವಕರಿಗೆ ಸ್ಫೂರ್ತಿದಾಯಕರಾಗಿ, ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಟಿ. ಹೆಬ್ಬಾರ್ ಹೇಳಿದರು.
ತುಳುಲಿಪಿ ಶಿಕ್ಷಕರಾಗಿ, ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಯುವವಾಹಿನಿ ಬಂಟ್ವಾಳದ ಸ್ಥಾಪಕಾಧ್ಯಕ್ಷ ಬಿ.ತಮ್ಮಯ್ಯರ ಸಂಸ್ಮರಣಾ ಕಾರ್ಯಕ್ರಮವನ್ನು ಬಂಟ್ವಾಳ ಯುವವಾಹಿನಿ ಗುರುವಾರ ಸಂಜೆ ಯುವವಾಹಿನಿ ಸಭಾಭವನದಲ್ಲಿ ಆಯೋಜಿಸಿದ್ದು, ಈ ವೇಳೆ ತಮ್ಮಯರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ, ನುಡಿನಮನ ಸಲ್ಲಿಸಿದ ಹೆಬ್ಬಾರ್, ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಈ ವೇಳೆ ಮಾತನಾಡಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ, ತಮ್ಮಯರ ಜ್ಞಾನಸಂಪತ್ತು ಅಗಾಧ, ಅವರು ಸ್ನೇಹಜೀವಿಯಾಗಿದ್ದುಕೊಂಡು, ಇತಿಹಾಸದ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದರು ಎಂದರು.
ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ್ ಶೆಟ್ಟಿ, ದ.ಕ. ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಉಪಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಬಂಟ್ವಾಳ ತಾಲೂಕು ಕಂದಾಯ ನಿರಿಕ್ಷಕ ನವೀನ್ ಬೆಂಜನಪದವು ತಮ್ಮಯರ ನೆನಪುಗಳನ್ನು ಮೆಲುಕು ಹಾಕಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಬಿ.ಇಂದಿರೇಶ್ ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿ ಮಾಜಿ ಅಧ್ಯಕ್ಷ ಶ್ರೀಧರ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಲೋಕೇಶ ಸುವರ್ಣ ಅಲೆತ್ತೂರು ವಂದಿಸಿದರು. ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಸ್ವಾಗತಿಸಿದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಮ್ಮಯ ಅವರ ಪುತ್ರ ನಿಶಾಂತ್, ಬಂಟ್ವಾಳ ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಬಿ, ಪಿಂಚಣಿದಾರರ ಸಂಘದ ಕಾರ್ಯದರ್ಶಿ ನೀಲೋಜಿ ರಾವ್, ಬಿ.ಸಿ.ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಶಿವಶಂಕರ್, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ, ಸಲಹೆಗಾರರಾದ ಅಣ್ಣು ಪೂಜಾರಿ, ಪ್ರೇಮನಾಥ್ ಕೆ, ಬಂಟ್ವಾಳ ತಾಲೂಕು ಕಚೇರಿಯ ಜನಾರ್ಧನ್, ಸಹಿತ ತಮ್ಮಯರ ಅಭಿಮಾನಿಗಳು, ಯುವವಾಹಿನಿಯ ಮಾಜಿ ಅಧ್ಯಕ್ಷರು, ಬಂಟ್ವಾಳ ಘಟಕದ ಸದಸ್ಯರು ಉಪಸ್ಥಿತರಿದ್ದರು.