ವಾಸ್ತವ

ಹೇಗಿದ್ದೀರಿ TEACHER? ಕ್ಷೇಮವೇ?

‘ಭವಿಷ್ಯ ಭಾರತದ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ… ಶಿಕ್ಷಕರೇ ನಿಮ್ಮ ವೃತ್ತಿಗಿಂದ ಶ್ರೇಷ್ಠ ಬೇರಾವುದೂ ಇಲ್ಲ’

ಸೆಪ್ಟೆಂಬರ್ 5ರಂದು ಆಯಾ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ದೊಡ್ಡ ಹಾಲ್ ನಲ್ಲಿ ತುಂಬಿದ ಸಭೆಯಲ್ಲಿ ನಿವೃತ್ತ ಶಿಕ್ಷಕರಿಗೆ ಹಾರ ಹಾಕಿಯೋ, ಸಾಧಕ ಶಿಕ್ಷಕರನ್ನು ಸನ್ಮಾನಿಸಿಯೋ ಅಥವಾ ಮತ್ತಾವುದೋ ಶಿಕ್ಷಕರನ್ನು ಬಾಯ್ತುಂಬಾ ಹೊಗಳಿ ವೇದಿಕೆಯಲ್ಲಿದ್ದವರ ಭಾಷಣದಲ್ಲಿ ಈ ಸಾಲು ಇದ್ದೇ ಇರುತ್ತದೆ. ಇದು ಪ್ರತಿ ವರ್ಷವೂ ರಿಪೀಟ್ ಆಗುತ್ತದೆ. ಆ ದಿನವಷ್ಟೇ ಅಲ್ಲ, ಪ್ರತಿಯೊಂದು ದಿನವೂ ಶಿಕ್ಷಕರ ದಿನ. ಸೆಪ್ಟೆಂಬರ್ 5ರಂದು ಸರ್ವಪಳ್ಳಿ ರಾಧಾಕೃಷ್ಣನ್ ಜಯಂತಿಯ ನಿಮಿತ್ತ ನಾವು ಶಿಕ್ಷಕರ ದಿನಾಚರಣೆ ಎಂದು ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಬೆಸ್ಟ್ ಟೀಚರ್ ಎಂಬ ಅವಾರ್ಡ್ ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟೋಪಚಾರ.. ಹೀಗೆ ದಿನಪೂರ್ತಿ TEACHERs DAY. DAYಗಳನ್ನು ಆಚರಿಸುವ ಪರಿಪಾಠ ಇಟ್ಟುಕೊಳ್ಳುವ ನಾವು ಸೆಪ್ಟೆಂಬರ್ ಬಂತೆಂದರೆ, ಟೀಚರ್ಸ್ ಡೇ ಎಂದು ಸಂಭ್ರಮಿಸುತ್ತೇವೆ. ನೀವು ನಮ್ಮವರೇ. ಹೀಗಾಗಿಯೇ ‘ಹೇಗಿದ್ದೀರಿ TEACHER? ಕ್ಷೇಮವೇ?’

TEACHER ಎಂಬ ಶಬ್ದದಲ್ಲಿ ಪಾಠ ಮಾಡುವವರೆಲ್ಲರೂ ಬಂದರು. ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಇಂಜಿನಿಯರಿಂಗ್, ಮೆಡಿಸಿನ್, ಪ್ಯಾರಾಮೆಡಿಸಿನ್ ಸಹಿತ ಎಲ್ಲ ಪದವಿ ನೀಡುವ ಕಾಲೇಜುಗಳು, ಸಂಗೀತ, ನೃತ್ಯ, ಯಕ್ಷಗಾನ, ವೃತ್ತಿಶಿಕ್ಷಣಗಳು ಹೀಗೆ ಮನುಷ್ಯ ಯಾವುದನ್ನೆಲ್ಲ ಕಲಿಯಬೇಕು ಅವುಗಳನ್ನೆಲ್ಲಾ ಕಲಿಸುವವರೂ ಟೀಚರ್ ಶಬ್ದದೊಳಗೆ ವಿಶಾಲವಾದ ಅರ್ಥದಲ್ಲಿ ಬರುತ್ತಾರೆ. ನಮ್ಮ ಮಕ್ಕಳು ಹೇಗೆ ಓದುತ್ತಾರೆ, ಹೇಗೆ ಕಲಿಯುತ್ತಾರೆ, ಬರೆಯುತ್ತಾರೆ, ಅವರ ವರ್ತನೆಗಳು ಹೇಗಿರುತ್ತವೆ ಎಂಬುದು ಸೂಕ್ಷ್ಮಮತಿಯುಳ್ಳ ಶಿಕ್ಷಕರಾದರೆ ಅವರಿಗೆ ಖಂಡಿತಾ ಗೊತ್ತಾಗುತ್ತದೆ. ಅಂಥ ಶಿಕ್ಷಕರೂ ನಮ್ಮ ಮನೆಯ ಸದಸ್ಯರಂತೆ. ಹೀಗಾಗಿಯೇ ನಾವಿಂದು ಕೇಳಬೇಕಾಗಿದೆ. ‘ಹೇಗಿದ್ದೀರಿ TEACHER? ಕ್ಷೇಮವೇ?’

ಕೊರೊನಾ ಆವರಿಸಿದ ಮೇಲೆ ನಮ್ಮ ವ್ಯವಸ್ಥೆಯೇ ಬುಡಮೇಲಾಯಿತು. ಕೆಲವೆಡೆ ONLINE ತರಗತಿಗಳು ಬಂದವು. ಸರ್ಕಾರಿ ಶಾಲೆಗಳು ವಿದ್ಯಾಗಮದಂಥ ಕಾರ್ಯಕ್ರಮಗಳನ್ನು ನಡೆಸಿದರೆ, ಖಾಸಗಿ ಶಾಲೆಗಳು ಬೇರೆಯದೇ ಹಾದಿ ಹಿಡಿದವು. ಕೆಲವರು ಕಂಪ್ಯೂಟರ್ ಕೀಲಿ ಒತ್ತದವರೂ ಆನ್ ಲೈನ್ ಶಿಕ್ಷಣ ಆರಂಭಿಸಿದ್ದಾರೆ. ನಮ್ಮ ಮಕ್ಕಳಿಗೆ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಚಿಂತೆ ನಮಗಿದ್ದಂತೆ ಶಿಕ್ಷಕರಿಗೂ ಮಕ್ಕಳ ಕುರಿತು ಕಾಳಜಿ ಇರುತ್ತದೆ. ಇದೇ ವೇಳೆ ಹಲವು ಶಿಕ್ಷಕರು ಕೆಲಸ ಕಳೆದುಕೊಂಡರು ಎಂಬ ವರ್ತಮಾನಗಳು ಬಂದರೆ, ಕೆಲವರಿಗೆ ವೇತನವೂ ಪಾವತಿಯಾಗಲಿಲ್ಲ ಎಂದು ಶಿಕ್ಷಕರೇ ಸಾಮಾಜಿಕ ಜಾಲತಾಣಗಳಲ್ಲಿಯೇ ಮಾಹಿತಿ ಹಂಚಿಕೊಂಡರು. ಹಾಗೆಯೇ ಬಹುತೇಕ ಶಿಕ್ಷಕರಿಗೆ ಆಡಳಿತ, ಪೋಷಕರು ಆಸರೆಯಾಗಿ ನಿಂತದ್ದೂ ಉಂಟು. ಒಬ್ಬೊಬ್ಬರದ್ದೂ ಒಂದೊಂದು ಕತೆ. ಶಿಕ್ಷಕರು ತರಕಾರಿ ಮಾರುವುದು, ವಾಚ್ ಮನ್ ಕೆಲಸ ಮಾಡುವುದು, ಗಾರೆ ಕೆಲಸ ಮಾಡುವ ಕುರಿತು ಸಾಕ್ಷ್ಯಚಿತ್ರಗಳು, ಪತ್ರಿಕಾ ವರದಿಗಳು ಬಂದವು. ಸದಾ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ, ದೇಶದ ಮುಂದಿನ ತಲೆಮಾರು, ಭವಿಷ್ಯದ ಇಂಜಿನಿಯರ್, ಭವಿಷ್ಯದ ಡಾಕ್ಟರ್…!! ಗಳನ್ನು ರೂಪಿಸುವುದು ಹೇಗೆ?  ಈ ಹಿನ್ನೆಲೆಯಲ್ಲಿಯೇ ನಮ್ಮ ಸುತ್ತಮುತ್ತಲಿರುವ ಶಿಕ್ಷಕರ ಒಳಿತು ಕೆಡುಕುಗಳು ಇಡೀ ಸಮಾಜಕ್ಕೆ ಪರಿಣಾಮ ಬೀರುವಂಥದ್ದು. ಹೀಗಾಗಿಯೇ  ‘ಹೇಗಿದ್ದೀರಿ TEACHER? ಕ್ಷೇಮವೇ?’

ಒಂದು ಸಿನಿಮಾ ಇದೆ. ಸಾಧ್ಯವಾದರೆ ನೋಡಿ. ಇದು ವಾಸ್ತವವೋ ಅಲ್ಲವೋ ಎಂಬ ನಿರ್ಧಾರ ನಿಮ್ಮದೆ. ಸಂಪೂರ್ಣವಾಗಿ ಶಿಕ್ಷಕರ ಕುರಿತೇ ಹೆಣೆಯಲಾದ ಕಥೆ. ಹದವಾದ ನಿರೂಪಣೆ, ಮನಮುಟ್ಟುವ ಅಭಿನಯ ನೀಡುವ ಶಬಾನಾ ಆಜ್ಮಿ, ಜೂಹಿ ಚಾವ್ಲಾ, ದಿವ್ಯಾ ದತ್ತಾ. ಚಿತ್ರದ ಹೆಸರು: Chalk N Duster . ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದ ಶಿಕ್ಷಕಿಯರ ಬದುಕಿನಲ್ಲಾಗುವ ಬದಲಾವಣೆಯ ಕತೆ ಇದು. ಕೊನೆಗೆ ಸಿನಿಮೀಯ ರೀತಿಯ ಸುಖಾಂತ್ಯ ಇದರಲ್ಲಿದೆ. ಶಿಕ್ಷಕರೇ ನಿಮ್ಮ ಬದುಕೂ ಹೀಗೆ ಸುಖವಾಗಲಿ. ನಾವು ಹೇಗಿದ್ದೀರಿ TEACHER? ಕ್ಷೇಮವೇ? ಎಂದು ಕೇಳಿದರೆ, ಫಸ್ಟ್ ಕ್ಲಾಸಾಗಿದ್ದೀನಿ ಎಂಬ ಉತ್ತರ ನಿಮ್ಮಿಂದ ದೊರಕುವಂತಾಗಲಿ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂಬ ಮಾತು ಒಂದೇ ದಿನಕ್ಕಾಗುತ್ತದೆ. ಪ್ರತಿದಿನ, ಪ್ರತಿ ಕ್ಷಣವೂ ನಮಗೆ ಹೊಸತನ್ನು ಕಲಿಸಿ ನಮ್ಮ ಬದುಕನ್ನು ರೂಪಿಸಿ ಅಜ್ಞಾತವಾಗುಳಿಯುವ ಅಗಣಿತ ಶಿಕ್ಷಕ ಸಮುದಾಯಕ್ಕೆ ನಮಸ್ತೆ. ಪ್ರತಿದಿನವೂ ಗುರುವಂದನೆ.

 

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.