ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಪಿಕಪ್ ವಾಹನ ಮತ್ತು ಕಾರೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪುತ್ತೂರು ನಗರ ಠಾಣಾ ಪೊಲೀಸರು 17.5 ಲಕ್ಷ ರೂ ಮೌಲ್ಯದ 175 ಕೆ.ಜಿ. ಗಾಂಜಾ, 3 ಲಕ್ಷ ರೂ ಮೌಲ್ಯದ ಪಿಕಪ್ ವಾಹನ, 4 ಲಕ್ಷ ರೂ ಮೌಲ್ಯದ ಕಾರು ಸೇರಿದಂತೆ 24.5 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಆರೋಪಿಗಳಾದ ಮಂಜೇಶ್ವರದ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು (26), ಮೊಹಮ್ಮದ್ ಶಫಿಕ್ (31) ಕನ್ಯಾನ ಮಂಕುಡೆ ನಿವಾಸಿ ಖಲಂದರ್ ಶಾಫಿ (26), ಎಂಬವರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8 (C) r/w 20(b) (ii) C ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗು 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.