ಕವರ್ ಸ್ಟೋರಿ

ಸಾವಿನ ಬಾಗಿಲ ತಟ್ಟಿ ಪ್ರಾಣ ಉಳಿಸಲು ನದಿಗೆ ಜಿಗಿಯುವ ನೇತ್ರಾವತಿವೀರರು

ಹರೀಶ ಮಾಂಬಾಡಿ

ಪ್ರತಿ ಮಳೆಗಾಲ ಬಂದಾಗಲೂ ಆಪದ್ಭಾಂಧವರಾಗಿ ಮುನ್ನುಗ್ಗುವವರು ಗೂಡಿನಬಳಿಯ ಈ ಸಾಹಸಿಗರು. ಇವರು ಆಪತ್ಬಾಂಧವರು. ಮೃತ್ಯುವಿನ ದವಡೆಗೆ ಸಿಲುಕಿದವರನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಲು ಸದಾ ಮುಂಚೂಣಿಯಲ್ಲಿರುವವರು. ಜೀವ ಉಳಿಸುವುದು ಮುಖ್ಯ ಎಂಬ ಧ್ಯೇಯದೊಂದಿಗೆ ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡು ಮುನ್ನಡೆಯುವವರು. ಬಂಟ್ವಾಳ ತಾಲೂಕಿನ ಗೂಡಿನಬಳಿಯ ನೇತ್ರಾವತಿವೀರರು.

ಗೂಡಿನಬಳಿ ಸತ್ತಾರ್, ಶಮೀರ್, ಮಹಮ್ಮದ್, ತೌಸೀಫ್, ಇಬ್ರಾಹಿಂ, ಆರೀಫ್ ಅಷ್ಟೇ ಅಲ್ಲ, ಅವರನ್ನೇ ರೋಲ್ ಮಾಡೆಲ್ ಆಗಿ ನದಿಗೆ ಜಿಗಿಯುವವ ಯುವಕರ ತಂಡವೇ ಇಲ್ಲಿದೆ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಹಲವಾರು ಮಂದಿಯನ್ನು ಅವರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.  ವರ್ಷದ ಹಿಂದೆ ನೇತ್ರಾವತಿಗೆ ಕುಟುಂಬವೊಂದರ ಎಲ್ಲ ಸದಸ್ಯರೂ ರಾತ್ರಿ ವೇಳೆ ಹಾರಿದಾಗ ಎರಡು ದಿನಗಳ ಕಾಲ ರಾತ್ರಿ ಹಗಲು ಅವರ ಶವಕ್ಕಾಗಿ ಹುಡುಕಾಡಿದ್ದು ಇದೇ ತಂಡ.  2020 ಮೇ ತಿಂಗಳಲ್ಲಿ ಗೂಡಿನಬಳಿಯ ನೇತ್ರಾವತಿ ನದಿ ಸೇತುವೆಗೆ ಬಂದ ಕಲ್ಲಡ್ಕ ಹನುಮಾನ್ ನಗರ ನಿವಾಸಿ ನಿಶಾಂತ್ (28) ದಿಢೀರನೆ ನದಿಗೆ ಹಾರಿದ. ಇದನ್ನು ಕಂಡು ಯುವಕರ ತಂಡ ತಡಮಾಡಲಿಲ್ಲ. ಅವರಲ್ಲಿದ್ದ ಶಮೀರ್, ಮಹಮ್ಮದ್, ತೌಸೀಫ್, ಜಾಹೀದ್, ಮುಕ್ತಾರ್, ಆರಿಫ್ ಮತ್ತಿತರರು ಜೀವದ ಹಂಗು ತೊರೆದು ನದಿಗೆ ಹಾರಿಯೇಬಿಟ್ಟರು. ಯುವಕನ್ನು ಮೇಲಕ್ಕೆ ತಂದರು. ಆ ಸಂದರ್ಭ ಆತನ ಪ್ರಾಣ ಉಳಿಸಲು ನಾನಾ ವಿಧದಲ್ಲಿ ಯತ್ನಿಸಿದರು. ಬಳಿಕ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ. ಆದರೆ ಆತನ ಪ್ರಾಣ ಉಳಿಸಲು ಯುವಕರು ನಡೆಸಿದ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಈದ್ ಸಂಭ್ರಮದಲ್ಲಿ ಬಂಧು ಮಿತ್ರರೊಡನೆ ಕಳೆಯುವ ಕ್ಷಣಗಳಲ್ಲಿ ಜಾತಿ, ಧರ್ಮ ಲೆಕ್ಕಿಸದೆ, ಮಾನವೀಯತೆಯ ನೆಲೆಯಲ್ಲಿ ವ್ಯಕ್ತಿಯೋರ್ವರ ಜೀವ ಉಳಿಸಲು ಪ್ರಯತ್ನಿಸಿದ ಕ್ಷಣವಿದು. ಕೊರೊನಾ ಸೋಂಕು ಸಂದರ್ಭ ಮೃತದೇಹ ಸುಡಲೂ ತಕರಾರು ತೆಗೆಯುವ, ಭೀತಿಪಡುವವರು ಇರುವ ಹೊತ್ತಿನಲ್ಲೇ ಮನುಷ್ಯನೊಬ್ಬನನ್ನು ಆತನಿಗೆ ರೋಗ ಇದೆಯೇ ಎಂಬುದನ್ನೂ ಲೆಕ್ಕಿಸದೆ, ಗುರುತು ಪರಿಚಯತವನ್ನೂ ಗಮನಿಸದೆ ತಮ್ಮ ಪ್ರಾಣದ ರಿಸ್ಕ್ ತೆಗೆದುಕೊಂಡು ಜೀವ ಉಳಿಸುವ ತಂಡವಿದು.ಈ ಯುವಕರಿಗೆ ಆಪದ್ಬಾಂಧವರು ಎಂಬ ಬಿರುದಿನೊಂದಿಗೆ ನೇತ್ರಾವತಿವೀರರು ಎಂದು ಗುರುತಿಸಿ ಸನ್ಮಾನಿಸಲಾಗಿದೆ. ಶವ ಮೇಲಕ್ಕೆತ್ತುವುದಷ್ಟೇ ಅಲ್ಲ, ಅದೆಷ್ಟೋ ಮಂದಿ ನದಿಗೆ ಹಾರುವ ಮುನ್ನವೇ ಯುವಕರ ಕೈಗೆ ಸಿಕ್ಕಿ ಮತ್ತೆ ಸುಖೀ ಜೀವನ ನಡೆಸುತ್ತಿರುವ ವೃತ್ತಾಂತಗಳೂ ಇವೆ.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts