ಬಿ.ಸಿ.ರೋಡ್ ಬೆಳಗ್ಗೆಯೇ ಸ್ತಬ್ದ – ಚಿತ್ರ, ವಿಡಿಯೋ: ಎಸ್.ಆರ್.ಕೈಕಂಬ
ಸರ್ಕಾರದ ಸೂಚನೆಯಂತೆ ಶನಿವಾರ ರಾತ್ರಿಯಿಂದಲೇ ಜನಸಂಚಾರ ನಿಷೇಧಿಸಿದ ಕಾರಣ ಭಾನುವಾರ ಬೆಳಗ್ಗೆಯೇ ಬಂಟ್ವಾಳ, ಬಿ.ಸಿ.ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ ಸ್ತಬ್ದಗೊಂಡಿತ್ತು. ಬೆಳಗ್ಗೆಯೇ ತೆರೆಯುತ್ತಿದ್ದ ಕೆಲ ಅಂಗಡಿಗಳು ಬಾಗಿಲು ಹಾಕಿದ್ದರೆ, ಹಾಲು, ಪತ್ರಿಕಾ ವಿತರಕರಷ್ಟೇ ಕಂಡುಬಂದರು. ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲೆ ಸಹಿತ ಬಂಟ್ವಾಳದಲ್ಲೂ ಕಟ್ಟುನಿಟ್ಟಿನ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಮತ್ತು ಬಿ.ಮೂಡ ಗ್ರಾಮಗಳಲ್ಲಿ ಕೊರೊನಾ ಅಬ್ಬರಿಸಿದ್ದು, ಕಳೆದ ಎರಡುವರೆ ತಿಂಗಳಲ್ಲಿ ನಾಲ್ಕು ಸಾವುಗಳು ಪುರಸಭೆ ವ್ಯಾಪ್ತಿಯಲ್ಲಿಯೇ ಸಂಭವಿಸಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಅಂಗಡಿ, ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ನಿರ್ಧಾರಕ್ಕೂ ಬಂದಿದ್ದು, ಸೋಮವಾರವೂ ನಿರ್ದಿಷ್ಟ ಹೊತ್ತಷ್ಟೇ ಅಂಗಡಿ ತೆರೆಯುವ ನಿರ್ಧಾರವನ್ನೂ ತಳೆದಿದ್ದಾರೆ ಎನ್ನಲಾಗಿದೆ.